ಅಂಚೆ ಕಚೇರಿಯ ಠೇವಣಿಗಳಿಗೂ ಆಧಾರ್ ಕಡ್ಡಾಯ

ನವದೆಹಲಿ: ಈಗಾಗಲೇ ಸರ್ಕಾರ ಪಾನ್, ಮೊಬೈಲ್, ಬ್ಯಾಂಕ್ ಹಾಗೂ ಸರ್ಕಾರಿ ದಾಖಲಾತಿಗಳಿಗೆ ಆಧಾರ್ ಅನ್ನು ಕಡ್ಡಾಯಗೊಳಿಸಿ ಅದಕ್ಕೆ ಸಂಬಂಧಿಸಿದಂತೆ ಗಡುವನ್ನು ನೀಡಿದ್ದು, ಈಗ ಅಂಚೆ ಕಚೇರಿಯಲ್ಲಿರುವ ಉಳಿತಾಯ ಖಾತೆಗಳಿಗೂ ಆಧಾರ್ ಕಡ್ಡಾಯಗೊಳಿಸಿದೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ (ಎನ್‍ಎಸ್‍ಸಿಎಸ್) ಹಾಗೂ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ಅಂಚೆ ಕಚೇರಿ ಯಲ್ಲಿರುವ ಎಲ್ಲಾ ಠೇವಣಿಗಳಿಗೂ ಆಧಾರ್ ಕಡ್ಡಾಯವಾಗಿ ಇರಲೇಬೇಕು ಎಂದು ಆದೇಶ ಹೊರಡಿಸಿದೆ.

ಅಂಚೆಯಲ್ಲಿರುವ ಉಳಿತಾಯ ಖಾತೆ, ಪಿಪಿಎಫ್, ಎನ್‍ಎಸ್‍ಸಿಎಸ್, ಕೆವಿಪಿಗಳಿಗೆ ಡಿಸೆಂಬರ್ 31 ರ ಒಳಗಡೆ ಆಧಾರ್ ಜೋಡಣೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಹಣಕಾಸು ಸಚಿವಾಲಯ ಎಲ್ಲಾ ಅಂಚೆ ಠೇವಣಿ ಖಾತೆಗಳಿಗೆ ಆಧಾರ್ ನಂಬರ್ ನೀಡಬೇಕು ಎಂದು ಸೆ. 29 ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸಿದ್ದು, ಈ ಯೋಜನೆಗಳಿಗೆ ಹೊಸದಾಗಿ ಸೇರುವವರಿಗೆ ಮಾತ್ರವಲ್ಲದೆ ಈಗಾಗಲೇ ಖಾತೆಗಳನ್ನು ಹೊಂದಿರುವಂತಹ ಗ್ರಾಹಕರೂ ಕೂಡ ಸಮೀಪದ ಅಂಚೆ ಕಚೇರಿಗಳಿಗೆ ಹೋಗಿ ಡಿ. 31 ರೊಳಗೆ ಆಧಾರ್ ನಂಬರ್ ಜೋಡಿಸಬೇಕೆಂದು ತಿಳಿಸಿದೆ.

ಒಂದು ವೇಳೆ ಆಧಾರ್ ಹೊಂದಿಲ್ಲದವರು ಅಥವಾ ಆಧಾರ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವವರು ತಮಗೆ ನೀಡಿರುವ ಆಧಾರ್ ಅರ್ಜಿಯ ನಕಲು ಪ್ರತಿಯನ್ನು ಸಲ್ಲಿಸಬೇಕು ಎಂದು ಹೇಳಿದೆ.

Comments

Leave a Reply

Your email address will not be published. Required fields are marked *