ಹಸುಗಳ ಆಧಾರ್ ಕಾರ್ಡ್ ವೆಚ್ಚವನ್ನು ಯಾರು ಭರಿಸ್ತಾರೆ? ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ: ದಿಗ್ವಿಜಯ್ ಪ್ರಶ್ನೆ

ನವದೆಹಲಿ: ಆಧಾರ್ ರೀತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ಹಸುಗಳಿಗೂ ನೀಡಲು ಹೊರಟಿರುವ ಕೇಂದ್ರದ ಪ್ರಸ್ತಾಪಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಆಧಾರ್ ವ್ಯವಸ್ಥೆ ಜಾರಿಗೆ ತಗಲುವ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮೋದಿಜೀ ಏನಾಯ್ತು? ಈಗ ನೀವು ಹಸುಗಳಿಗೂ ಆಧಾರ್ ಕಾರ್ಡ್ ನೀಡುತ್ತೀರಾ. ಇದಕ್ಕೆ ಎಷ್ಟು ಖರ್ಚಾಗುತ್ತದೆ? ಇದರ ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ ಎಂದು ಪ್ರಶ್ನಿಸಿದ್ದಾರೆ. ಈ ಆಧಾರ್ ಬಂದ ನಂತರ ಮಾಂಸ ವ್ಯಾಪಾರ ಮಾಡುವ ಮುಸ್ಲಿಮ್ ಬಾಂಧವರಿಗೆ ಗೋ ರಕ್ಷಕರಿಂದ ರಕ್ಷಣೆ ಸಿಗುತ್ತದೆ ಎಂದು ಭರವಸೆ ನೀಡುತ್ತೀರಾ ಎಂದು ಕೇಳಿದ್ದಾರೆ.

ಮೋದಿ ಭಕ್ತರೇ.. ಅಹಿಂಸಾತ್ಮಕವಾಗಿ ಗೋವುಗಳನ್ನು ರಕ್ಷಣೆ ಮಾಡುವುದನ್ನು ತಿಳಿದುಕೊಳ್ಳಿ. ದೇಶ ಒಡೆಯುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

ದೇಶಾದ್ಯಂತ ಇರುವ ಪ್ರತಿ ಹಸು ಮತ್ತು ಅದರ ಸಂತತಿಗೆ “ವಿಶಿಷ್ಟ ಗುರುತಿನ ಸಂಖ್ಯೆ’ಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ  ಸೋಮವಾರ ಸುಪ್ರೀಂಗೆ ಸಲ್ಲಿಸಿತ್ತು.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ವರದಿಯನ್ನು ಕೋರ್ಟ್‍ಗೆ ಒಪ್ಪಿಸಿದ ಕೇಂದ್ರ, ಹಸುಗಳ ಕಳ್ಳಸಾಗಣೆ ತಡೆಯಲು ಪ್ರತಿ ಜಿಲ್ಲೆ ಯಲ್ಲೂ ಕನಿಷ್ಠ 500 ಹಸುಗಳ ವಾಸಕ್ಕೆ ಅಗತ್ಯ ವಿರುವ ಗೋಶಾಲೆ ನಿರ್ಮಿಸಿ, ಬಿಡಾಡಿ ದನಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಬಿಡಾಡಿ ದನಗಳನ್ನು ಪೋಷಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಹೇಳಿದೆ.

Comments

Leave a Reply

Your email address will not be published. Required fields are marked *