ಗುಜರಿ ಅಂಗಡಿಯಲ್ಲಿ ಸಾವಿರಾರು ಆಧಾರ್ ಕಾರ್ಡ್ ಪತ್ತೆ!

ಜೈಪುರ್: ಆಧಾರ್ ಕಾರ್ಡ್‍ಗಳು ಗ್ರಾಹಕರ ಕೈ ಸೇರುವ ಮುನ್ನವೆ ಗುಜರಿ ಅಂಗಡಿ ಸೇರಿರುವ ಘಟನೆ ರಾಜಸ್ಥಾನದ ಜೈಪುರ್ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗುರುವಾರ ಜೈಪುರದ ಗುಜರಿ ಅಂಗಡಿ ಸಮೀಪ ಮಕ್ಕಳು ಹೋಗುತ್ತಿದ್ದಾಗ ಅಂಗಡಿಯಲ್ಲಿ ಆಧಾರ್ ಕಾರ್ಡ್ ಗಳನ್ನು ನೋಡಿದ್ದಾರೆ. ಕೂಡಲೇ ಸ್ಥಳೀಯ ಪಾಲಿಕೆ ಸದಸ್ಯರಿಗೆ ವಿಷಯ ಮುಟ್ಟಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಿಮಿಸಿದ ಕೌನ್ಸಿಲರ್ ಇಕ್ರಾಮುದ್ದೀನ್, ಗುಜರಿ ಅಂಗಡಿಯಲ್ಲಿ ಸಿಕ್ಕ ಆಧಾರ್ ಕಾರ್ಡ್‍ನಲ್ಲಿದ್ದ ಮೊಬೈಲ್ ನಂಬರ್‍ಗಳಿಗೆ ಕರೆ ಮಾಡಿದ್ದಾರೆ. ಆದರೆ ವಾರಸುದಾರರು ಆಧಾರ್ ಕಾರ್ಡ್ ಇನ್ನೂ ತಮ್ಮ ಕೈ ಸೇರಿಲ್ಲವೆಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಸ್ಥಳೀಯ ಅಂಚೆ ಕಚೇರಿ ಹಾಗೂ ಜುಲುಪುರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.

ಚೀಲಗಳಲ್ಲಿ ತುಂಬಿದ್ದ ಆಧಾರ್ ಕಾರ್ಡ್‍ಗಳಿಗೆ 5 ರೂ. ಅಂಚೆ ಚೀಟಿ ಲಗತ್ತಿಸಿ, ಸಂಬಂಧಪಟ್ಟ ಅಂಚೆ ಕಚೇರಿಗೆ ತಲುಪಿಸುವ ಮುದ್ರೆಯನ್ನು ಕೂಡ ಹಾಕಲಾಗಿದೆ. ಆಧಾರ್ ಕಾರ್ಡ್‍ಗಳನ್ನು ತಲುಪಿಸುವ ವಿಚಾರದಲ್ಲಿ ಭದ್ರತಾ ಲೋಪ ಎದುರಾಗಿದೆ ಎಂದು ಹೇಳಿದ್ದಾರೆ.

ಚೀಲದಲ್ಲಿ ಸುಮಾರು 4 ರಿಂದ 5 ಸಾವಿರ ಮಂದಿಯ ಆಧಾರ್ ಕಾರ್ಡ್ ಸಿಕ್ಕಿದೆ. ಮಕ್ಕಳು, ಮಹಿಳೆಯರು ಹಾಗೂ ಇನ್ನೂ ಅನೇಕರಿಗೆ ಸೇರಿದ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಇವುಗಳನ್ನು ತುಂಬಿ ಗುಜರಿ ಅಂಗಡಿಗೆ ಮಾರಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಜುಲುಪುರ ಪೊಲೀಸ್ ಠಾಣಾ ಅಧಿಕಾರಿ ಲಿಖ್ಮ ರಾಮ್‍ರವರು, ಗುಜರಿ ಅಂಗಡಿಯಲ್ಲಿ ಆಧಾರ್ ಕಾರ್ಡ್ ಗಳು ಸಿಕ್ಕ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೇ ಸಂಬಂಧಪಟ್ಟ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *