ಚಾ.ನಗರ| ಮದುವೆಗೆ ಹೆಣ್ಣು ಸಿಗದೇ ಖಿನ್ನತೆ – ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣಿಬಿಟ್ಟ ಯುವಕ

– ತಾಯಿ ಕಣ್ಣೆದುರೇ ಯುವಕ ದಾರುಣ ಸಾವು

ಚಾಮರಾಜನಗರ: ಮದುವೆಯಾಗಲು ಹೆಣ್ಣು ಸಿಗಲಿಲ್ಲ ಅಂತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಟಿಸಿ ಹುಂಡಿ ಬಳಿ ನಡೆದಿದೆ.

ಮಸಣಶೆಟ್ಟಿ (27) ಸಾವನ್ನಪ್ಪಿದ ಯುವಕ. ಹೆಣ್ಣು ಸಿಗದೇ ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯುತ್ ಕಂಬ ಏರಿದ್ದ. ಕಂಬದಿಂದ ಕೆಳಗಿಳಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಇಳಿಯುವ ವೇಳೆ ಆಯತಪ್ಪಿ ವಿದ್ಯುತ್ ವೈರ್ ತಗುಲಿ ಯುವಕ ಸಾವನ್ನಪ್ಪಿದ್ದಾನೆ.

ಮದುವೆಗೆ ಹೆಣ್ಣು ಸಿಕ್ಕಿಲ್ಲವೆಂದು ಮಸಣಶೆಟ್ಟಿ ಕುಡಿತದ ದಾಸನಾಗಿದ್ದ. ಮಸಣಶೆಟ್ಟಿಯದ್ದು ಚಿಕ್ಕಮನೆ ಹಾಗೂ ಆಸ್ತಿ ಜಮೀನು ಇಲ್ಲ ಎಂಬ ಕಾರಣ ಎರಡು ಬಾರಿ ನೋಡಿ ಬಂದ ಹೆಣ್ಣಿನ ಕಡೆಯವರು ರಿಜೆಕ್ಟ್ ಮಾಡಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಾಗಿದ್ದ. ಇಂದು ಬೆಳಗ್ಗೆ ಹೈಟೆನ್ಷನ್ ಕಂಬ ಏರಿದ್ದ. ಕಂಬವನ್ನು ಏರಿ ತನ್ನ ತಾಯಿ ಎದುರೇ ಸಾವಿಗೆ ಶರಣಾಗಿದ್ದಾನೆ.

ಮಗನ ಸಾವನ್ನ ಕಣ್ಣಾರೆ ಕಂಡು ತಾಯಿ ದಿಗ್ಭ್ರಾಂತರಾಗಿದ್ದಾರೆ. ಸದ್ಯ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಮಸಣಶೆಟ್ಟಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.