ಸಿಎಂ ನೋಡಲು ಹೋಗಿದ್ದ ಯುವಕನಿಗೆ ವಿದ್ಯುತ್ ಶಾಕ್!

– ಬೆಳಗಾವಿಯಲ್ಲಿ ವಿದ್ಯುತ್ ಶಾಕ್‍ಗೆ ಇಬ್ಬರು ಮಹಿಳೆಯರು ಬಲಿ

ಚಿಕ್ಕೋಡಿ: ಸಿಎಂ ಕಾರ್ಯಕ್ರಮದಲ್ಲಿ ವಿದ್ಯುತ್ ತಗುಲಿ (Electric shock) ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಾಗವಾಳ ತಾಲೂಕಿನ ಜುಗುಳ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಶಾಕ್‍ನಿಂದ ಗಾಯಗೊಂಡ ಯುವಕನನ್ನು ಮಹೇಶ್ ಹುಣ್ಣರಗಿ (22) ಎಂದು ಗುರುತಿಸಲಾಗಿದೆ. ಯುವಕ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ನೋಡಲು ಮೇಲ್ಛಾವಣಿ ಮೇಲೆ ಹತ್ತಿದ್ದ ವೇಳೆ ವಿದ್ಯುತ್ ತಗುಲಿದೆ. ಪರಿಣಾಮ ಯುವಕನ ಮುಖ ಹಾಗೂ ಕೈ ಭಾಗಕ್ಕೆ ಗಂಭೀರ ಗಾಯವಾಗಿದೆ. ಬಳಿಕ ಅಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಎಂ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಗ್ರಾಮಕ್ಕೆ ಬಂದಿದ್ದ ವೇಳೆ ಈ ಅವಘಡ ನಡೆದಿದೆ.

ಇಬ್ಬರು ಮಹಿಳೆಯರ ದುರ್ಮರಣ
ದೇವಸ್ಥಾನ ಸ್ವಚ್ಚಗೊಳಿಸುವ ವೇಳೆ ಇಬ್ಬರು ಮಹಿಳೆಯರಿಗೆ ವಿದ್ಯುತ್ ಶಾಕ್ ತಗುಲಿ ಸಾವಿಗೀಡಾದ ಘಟನೆ ಬೆಳಗಾವಿ (Belagavi) ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯರನ್ನು ಕಲಾವತಿ (37) ಹಾಗೂ ಸವಿತಾ (36) ಎಂದು ಗುರುತಿಸಲಾಗಿದೆ. ವಾಲ್ಮೀಕಿ ದೇವಸ್ಥಾನ ಸ್ವಚ್ಛಗೊಳಿ ಬಾಗಿಲು ಹಾಕುವಾಗ ಈ ದುರ್ಘಟನೆ ನಡೆದಿದೆ. ಜಿಟಿ ಜಿಟಿ ಮಳೆಯ ಪರಿಣಾಮ ಪಕ್ಕದಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.


ಅಬಘಡದಲ್ಲಿ ಮೃತ ಕಲಾವತಿಯ ಪತಿ ಮಾರುತಿ ಬಿದರವಾಡಿ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.