ಸರಸ ಸಲ್ಲಾಪದ ವೇಳೆ ರೆಡ್‌ಹ್ಯಾಂಡಾಗಿ ಲಾಕ್; ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಂದ ಮಗಳು

ಬೆಂಗಳೂರು: ಸರಸ ಸಲ್ಲಾಪದಲ್ಲಿದ್ದಾಗ ರೆಡ್‌ಹ್ಯಾಂಡಾಗಿ ತಗಲಾಕ್ಕೊಂಡ ಮಗಳು ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ನಡೆದಿದೆ.

ಜಯಲಕ್ಷ್ಮಿ (46) ಕೊಲೆಯಾದ ತಾಯಿ. ಈಕೆಯ ಪುತ್ರಿ ಸ್ನೇಹಿತನ ಜೊತೆ ಸೇರಿ ತಾಯಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಮಹಿಳೆ ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇತ್ತ ಆಕೆಯ ಮಗಳು ಸ್ನೇಹಿತನ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ತಾಯಿ ಮನೆಯಲ್ಲಿಲ್ಲದಿದ್ದಾಗ ಸ್ನೇಹಿತನನ್ನ ಮನೆಗೆ ಕರೆಸಿಕೊಂಡಿದ್ದಳು. ಸ್ನೇಹಿತನ ಜೊತೆ ಇರುವಾಗಲೇ ತಾಯಿಗೆ ಮಗಳು ಸಿಕ್ಕಿಬಿದ್ದಿದ್ದಾಳೆ. ಈ ವೇಳೆ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಪೊಲೀಸರಿಗೆ ಮಾಹಿತಿ ನೀಡಿ ಸುಳ್ಳು ಕಥೆ ಕಟ್ಟಿದ್ದಳು. ಬಾತ್‌ರೂಮ್‌ನಲ್ಲಿ ಬಿದ್ದು ತಾಯಿ ಸಾವನ್ನಪ್ಪಿದ್ದಾಳೆಂದು ಆರೋಪಿತೆ ಸುಳ್ಳು ಹೇಳಿದ್ದಳು. ಮೃತದೇಹ ನೋಡಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕೊಲೆ ಮಾಡಿದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ದಾಖಲಿಸ್ತೀವಿ. ಕೊಲೆಯಾಗಿರೋ ಮಹಿಳೆ 46 ವರ್ಷದ ಜಯಲಕ್ಷ್ಮೀ. ಒಬ್ಬ ಮಹಿಳೆ ಮತ್ತು ಪುರುಷನನ್ನು ಬಂಧನ ಮಾಡಿದ್ದೀವಿ. ಆರಂಭದಲ್ಲಿ ಕೊಲೆಯಾಗಿರೋ ಶಂಕೆಯಿತ್ತು. ನಂತರ ಮರಣೋತ್ತರ ಪರೀಕ್ಷೆ ಮೂಲಕ ಕೊಲೆ ಆಗಿರೋದು ತಿಳಿಯಿತು. ಆರಂಭದಲ್ಲಿ ಮಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದರು. ತಾಯಿಕೆ ಆರೋಗ್ಯ ಸರಿ ಇರಲಿಲ್ಲ. ಅನಂತರ ಬಿದ್ದು ಸಾವಾಗಿದ್ದಾರೆ ಎಂದಿದ್ದರು. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ತಿಳಿಸಿದ್ದಾರೆ.