ಪೈಸೆ ಪೈಸೆ ಕೂಡಿಟ್ಟು ಕಟ್ಟಿದ ಮನೆ ಅನ್ಯರ ಪಾಲು

-ಮನನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ

ತುಮಕೂರು: ಬಡ ಕುಂಟುಂಬವೊಂದು ಪೈಸೆ ಪೈಸೆ ಕೂಡಿಟ್ಟು ಮನೆ ಕಟ್ಟಿದ್ದು, ಈಗ ಆ ಮನೆಯಲ್ಲಿ ವಾಸ ಮಾಡುವ ಭಾಗ್ಯ ಆ ಕುಟುಂಬಕ್ಕೆ ಬಂದಿಲ್ಲ. ಬದಲಾಗಿ ಇಡೀ ಮನೆ ಅನ್ಯ ವ್ಯಕ್ತಿಯ ಪಾಲಾಗಿದೆ. ಬಡ್ಡಿ ದಂಧೆಕೋರರ ಜೊತೆ ಸೇರಿಕೊಂಡು ಪೊಲೀಸರು ದೌರ್ಜನ್ಯ ಎಸಗಿ ಮನೆ ಖಾಲಿ ಮಾಡಿಸಿದ್ದಾರಂತೆ. ಬೀದಿಪಾಲಾದ ಈ ಕುಟುಂಬ ಪೊಲೀಸರು ಪದೇ ಪದೇ ನೀಡುತ್ತಿರುವ ಹಿಂಸೆಯಿಂದ ಬೇಸತ್ತು ದಯಾಮರಣದ ಮೊರೆ ಹೋಗಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಬಳಿ ಇರುವ ಮಾರನಾಯಕನಪಾಳ್ಯದ ಕುಟುಂಬ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಬರೆದಿರುವ ದಯಾಮರಣದ ಅರ್ಜಿ ಸಲ್ಲಿಸಿದೆ. ವೃದ್ಧೆ ಸುಶೀಲ ಕುಟುಂಬ ದಯಾಮರಣದ ಮೊರೆ ಹೋಗಲು ಕ್ಯಾತಸಂದ್ರ ಪೊಲೀಸರಿಂದ ಆಗುತ್ತಿರುವ ನಿರಂತರ ದೌರ್ಜನ್ಯ ಕಾರಣವಂತೆ. ಸುಶೀಲಮ್ಮ ಸಿದ್ದಂಗ ಮಠದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿ, ಪೈಸೆ ಪೈಸೆ ಕೂಡಿಟ್ಟು ಮನೆ ಕಟ್ಟಿದ್ದರು. ಮನೆ ಕಟ್ಟುವಾಗ ಸುಶೀಲಮ್ಮಗೆ ಗೊತ್ತಿಲ್ಲದೆ ಅವರ ಮಗಳು ವೀಣಾ, ಎಮ್. ಎಲ್. ಗಂಗಾಧರ್ ಎನ್ನುವವರಿಂದ ಸಾಲ ತಂದಿದ್ದಳು ಎನ್ನಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ವೀಣಾ ಕಾಣೆಯಾಗಿದ್ದಾಳೆ.

ತನ್ನ ಹಣ ವಾಪಸ್ ಕೊಡುವಂತೆ ಗಂಗಾಧರ್ ವೃದ್ಧೆ ಸುಶೀಲಮ್ಮಗೆ ದಿನನಿತ್ಯ ಕಾಟ ಕೊಡುತಿದ್ದ. ಮಗಳು ಸಾಲ ತಂದಿರುವ ಬಗ್ಗೆ ತನಗೆ ಗೊತ್ತಿಲ್ಲ ಎಂದು ಸುಶೀಲಮ್ಮ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಗಂಗಾಧರ್ ಕ್ಯಾತಸಂದ್ರ ಪೊಲೀಸರ ಮೂಲಕ ನಿರಂತರ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸುಶೀಲಮ್ಮ ಕುಟುಂಬ ಆರೋಪಿಸಿದೆ. ಗಂಗಾಧರ್ ಜೊತೆ ಸೇರಿಕೊಂಡು ಕ್ಯಾತಸಂದ್ರ ಪಿಎಸೈ ರಾಜು, ಸುಶೀಲಮ್ಮರನ್ನು ಮನೆಯಿಂದ ಖಾಲಿ ಮಾಡಿಸಿ, ಮನೆಯನ್ನು ಗಂಗಾಧರ್ ಸುಪರ್ದಿಗೆ ಕೊಡಿಸಿದ್ದಾರೆ. ಹಾಗಾಗಿ ಸುಶೀಲಮ್ಮ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಸಿದ್ದಗಂಗಾ ಮಠದ ಅಂಗಡಿಯಲ್ಲೆ ವಾಸವಿದ್ದಾರೆ.

ಸುಶೀಲಮ್ಮರ ಹೊಸ ಮನೆಗೆ ಗಂಗಾಧರ್ ಬೀಗ ಜಡಿದಿದ್ದಾನೆ. ಇಷ್ಟಕ್ಕೆಲ್ಲಾ ಕ್ಯಾತಸಂದ್ರ ಪೊಲೀಸರ ಕುಮ್ಮಕ್ಕೆ ಕಾರಣ ಅನ್ನೊದು ಸುಶೀಲಮ್ಮರ ಆರೋಪ. ಇಷ್ಟಕ್ಕೆ ಸುಮ್ಮನಾಗದ ಕ್ಯಾತಸಂದ್ರ ಪೊಲೀಸರು ಪದೇ ಪದೇ ಈ ಕುಟುಂಬದವರನ್ನು ಠಾಣೆಗೆ ಕರೆಯಿಸಿ ಗಂಗಾಧರ್ ಕುಟುಂಬಕ್ಕೆ 10 ಲಕ್ಷ ರೂ ಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಮೇಲಿಂದ ಮೇಲೆ ವಿಚಾರಣೆಗೆ ಕರೆದು ವಶಕ್ಕೆ ಪಡೆಯುವುದು, ಸುಶೀಲಮ್ಮರ ಮಕ್ಕಳಾದ ಪ್ರದೀಪ್ ಮತ್ತು ಸಂದೀಪ್ ರ ಮೇಲೆ ಸರಗಳ್ಳತನ, ರೇಪ್ ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಾರಂತೆ. ಪೊಲೀಸರ ಈ ದೌರ್ಜನ್ಯದಿಂದ ಬೇಸತ್ತ ಈ ಕುಟುಂಬ ಈಗ ದಯಾಮರಣದ ಮೊರೆ ಹೋಗಿದೆ.

ಸಾಲ ಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಗಂಗಾಧರನಿಗಿಂತ ಪೊಲೀಸರ ಕಾಟವೇ ಸುಶೀಲಮ್ಮ ಕುಟುಂಬಕ್ಕೆ ಹೆಚ್ಚಾಗಿದೆ. ಹಾಗಾಗಿ ಅವರು ದಯಾಮರಣದ ಮೊರೆ ಹೋಗಿದ್ದಾರೆ. ದಯಾಮರಣಕ್ಕೆ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಂದ ಅನುಮತಿ ಸಿಗದೇ ಇದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಜೀವ ತೊರೆಯಲು ಈ ಕುಟುಂಬ ಮುಂದಾಗಿದೆ.

Comments

Leave a Reply

Your email address will not be published. Required fields are marked *