ಬಿರುಗಾಳಿ ಮಳೆಗೆ ಧರೆಗುರುಳಿದ ಮರ, ಮುರಿದ ವಿದ್ಯುತ್ ಕಂಬ – ಗೊಮ್ಮಟೇಶ್ವರ ದೇವಸ್ಥಾನದ ಛಾವಣಿಗೂ ಹಾನಿ

– ಸೊರಬ ತಾಲೂಕಿನ ಹಲವೆಡೆ ಮಳೆ ಅವಾಂತರ ಸೃಷ್ಟಿ

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿ ಮಳೆಗೆ (Heavy Rain) ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಶಿವಮೊಗ್ಗ ಜಿಲ್ಲೆಯ (Shivamogga) ಸೊರಬ ತಾಲೂಕಿನಲ್ಲಿ ನಡೆದಿದೆ.

ಸೊರಬ ತಾಲೂಕಿನ ಚಂದ್ರಗುತ್ತಿ ಬಳಿಯ ಅಂಕರವಳ್ಳಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಮನೆಯ ಹೆಂಚು ತಗಡುಗಳಿಗೆ ಹಾನಿಯಾಗಿದೆ. ಜೊತೆಗೆ ಶೆಡ್‌ನಲ್ಲಿದ್ದ ಕಾರಿಗೂ ಹಾನಿಯಾಗಿದೆ. ಮತ್ತೊಂದೆಡೆ ಅಂಗಡಿ ಮಳಿಗೆ ಮೇಲೂ ಮರ ಉರುಳಿದ್ದು, ಅಂಗಡಿಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಕರ್ತವ್ಯ ಸಮಯದಲ್ಲಿ ಲಂಚ ಪಡೆದ ಮಹಿಳಾಧಿಕಾರಿ – ಕಡ್ಡಾಯ ನಿವೃತ್ತಿಗೊಳಿಸಿ ಆದೇಶ

ಇನ್ನೂ ಅಂಕರವಳ್ಳಿ ಚಂದ್ರಗುತ್ತಿ ಮಾರ್ಗದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಸ್ಥಳೀಯರು ಮರವನ್ನು ಜೆಸಿಬಿ ಮೂಲಕ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಲ್ಕುಣಿ ಕ್ರಾಸ್ ಬಳಿಯೂ ಮರವೊಂದು ಉರುಳಿ ಬಿದ್ದಿದೆ. ಬಿರುಗಾಳಿಗೆ ಜೋಳದಗುಡ್ಡೆ ಸಮೀಪದ ಗೊಮ್ಮಟೇಶ್ವರ ದೇವಸ್ಥಾನದ (Gommateshwara Temple) ಮೇಲ್ಛಾವಣಿಗೂ ಹಾನಿಯಾಗಿದೆ.

ಹಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಯಿತು. ಒಟ್ಟಾರೆ ಉತ್ತಮ ಮಳೆಯಾಗಿದೆ. ಬಿಸಿಲಿನಿಂದ ಕಾವೇರುತ್ತಿದ್ದ ಇಳೆ ತಂಪಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ, ಮತ್ತೊಂದೆಡೆ ಹಾನಿ ಉಂಟುಮಾಡಿರುವುದು ದುರಂತ ಎನಿಸಿದೆ. ಇದನ್ನೂ ಓದಿ: ಒಂದು ಸಣ್ಣ ಆ್ಯಕ್ಸಿಡೆಂಟ್‌.. ರಕ್ತನೂ ಬರಲಿಲ್ಲ, ಆದ್ರೆ ಬ್ರೈನ್ ಡೆಡ್!