ತಲೆಗೆ ಹೇರ್ ಡೈ ಹಾಕ್ಕೊಂಡು ಬಾ, ಗೋವಾಗೆ ಹೋಗಿ ಮರಳಲ್ಲಿ ಉರುಳಾಡೋಣ ಎಂದು ಮಹಿಳಾ ಅಧಿಕಾರಿಗೆ ಕಿರುಕುಳ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರು ಜೀವನ ನಡೆಸಲು ಕಷ್ಟವಿದೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಇದೀಗ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗೆ ಅಲ್ಲಿನ ಅಧೀನ ಕಾರ್ಯದರ್ಶಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.

ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು, ತನ್ನ ಮೇಲಿನ ಕಿರುಕುಳ ಬಗ್ಗೆ ಮಹಿಳಾ ಅಧಿಕಾರಿ ಇದೀಗ ಹಿರಿಯ ಅಧಿಕಾರಿ, ಸ್ಪೀಕರ್ ಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಏನಿದು ಕಿರುಕುಳ?: ನಾನು ಎಲ್ಲರಿಗಿಂತ ನಿನ್ನನ್ನೇ ಇಷ್ಟಪಡೋದು. ನಾವೆಲ್ಲ ಹೋಗಿ ಗೋವಾಕ್ಕೆ ಹೋಗಿ ಮರಳಿನಲ್ಲಿ ಉರುಳಾಡೋಣ. ನೀನು ತಲೆಗೆ ಹೇರ್ ಡೈ ಮಾಡಿಕೊಂಡು ಬಾ. ಸ್ಮಾರ್ಟ್ ಆಗಿ ಬಾ ನನಗೆ ಎನರ್ಜಿ ಬರಬೇಕು. ನಿನ್ನ ಮಗಳಿಗೆ ಮದುವೆ ಯಾಕೆ ಮಾಡುತ್ತೀಯಾ. ನಿನ್ನ ಬಾಳು ಹಾಳಾದ ಹಾಗೆ ಆಗುತ್ತೆ. ಅವಳಿಗೆ ಮದುವೆ ಮಾಡಬೇಡ. ನೀನು ಎರಡನೇ ಮದುವೆ ಯಾಕೆ ಮಾಡಿಕೊಂಡೆ. 10 ವರ್ಷದ ಹಿಂದೆ ನನಗೆ ಗೊತ್ತಿದ್ದರೆ ನಾನು ನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ. ನೀನು ಚೆನ್ನಾಗಿದ್ದೀಯ ಅಂತ ನಿನಗೆ ಕೊಬ್ಬಾ. ನಾನು ಹತ್ತು ವರ್ಷ ಇರುತ್ತೀನಿ. ಈ ಹತ್ತು ವರ್ಷದಲ್ಲಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದೆಲ್ಲಾ ಕಾರ್ಯದರ್ಶಿ ಮೂರ್ತಿ ಕಿರುಕುಳ ನೀಡಿದ್ದಾನೆ ಅಂತ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.

ಈ ಕುರಿತು ಒಂದು ತಿಂಗಳ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಂತೆ. ಆ ಬಳಿಕ ಮಹಿಳಾ ಅಧಿಕಾರಿ ಕಾನೂನು ಸಚಿವ ಜಯಚಂದ್ರರಿಗೂ ಈ ಕುರಿತು ನೀಡಿದ್ದರಂತೆ. ಈ ವೇಳೆ ಸಚಿವರು ಕಾರ್ಯದರ್ಶಿಯನ್ನು ಕರೆದು ಎಚ್ಚರಿಕೆ ನೀಡಿದ್ದರು. ಆದ್ರೆ ಸಚಿವರ ಅವರ ಮಾತಿಗೆ ಕ್ಯಾರೆ ಎನ್ನದ ಆತ ತನ್ನ ಚಾಳಿ ಮುಂದುವರೆಸಿದ್ದಾನೆ. ಇದರಿಂದ ನೊಂದ ಮಹಿಳಾ ಅಧಿಕಾರಿ ನೇರವಾಗಿಯೇ ಜಯಚಂದ್ರಗೆ ಪತ್ರದ ಮುಖಾಂತರ ದೂರು ನೀಡಿದ್ದಾರೆ. ದೂರಿನಲ್ಲಿ ತಮ್ಮ ಮೇಲಿನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಾರ್ಯದರ್ಶಿ ಮೂರ್ತಿಯ ಅಕ್ರಮದ ಬಗ್ಗೆ ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರಿಸಲಾಗಿತ್ತು. ಈಗಾಗಲೇ ಈತನ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದ್ದು, ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರು ಹಾಜರಾಗಿದ್ದನು. ಮೂರ್ತಿ ವಿರುದ್ಧ ಹಲವು ಮಹಿಳಾ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಸ್ಪೀಕರ್ ಗೆ ಮೌಖಿಕ ದೂರು ನೀಡಿದ್ದರೂ ಸ್ಪೀಕರ್ ಕ್ರಮ ಕೈಗೊಂಡಿಲ್ಲ ಅಂತ ಆರೋಪ ವ್ಯಕ್ತವಾಗಿದೆ.

ಅಲ್ಲದೇ ಈ ಹಿಂದೆ ಈತನ ಆಡಳಿತಕ್ಕೆ ಬೇಸೆತ್ತು ಮಹಿಳಾ ಅಧಿಕಾರಿಗಳು ವಿಧಾನಸೌಧದಲ್ಲಿ ಪ್ರತಿಭಟನೆ ಕೂಡ ನಡೆಸಿದ್ರು. ಆ ಸಂದರ್ಭದಲ್ಲೂ ಕೂಡ ಎಚ್ಚೆತ್ತುಕೊಳ್ಳದ ಸ್ಪೀಕರ್ ಮೂರ್ತಿಯ ಮೇಲೆ ಅನುಕಂಪ ತೋರಿಸಿ ಮಹಿಳಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು. ಈತನ ಬದಲಾವಣೆಗೆ ಮುಖ್ಯಮಂತ್ರಿ ಕೂಡ ಶಿಫಾರಸ್ಸು ಮಾಡಿದ್ರು. ಆದ್ರೆ ದಲಿತ ಸಂಘಟನೆಗಳನ್ನು ಮುಖ್ಯಮಂತ್ರಿಗಳ ಮನೆಗೆ ಕಳುಹಿಸಿ ಬದಲಾಯಿಸದಂತೆ ಒತ್ತಡ ಹಾಕಿಸಿದ್ದ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *