ಮೂರು ವರ್ಷದ ದ್ವೇಷಕ್ಕೆ ಬೆಂಗ್ಳೂರಿನ ನಡುರಸ್ತೆಯಲ್ಲಿ ಕೊಚ್ಚಿ ಕೊಂದ್ರು!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹಳೆಯ ದ್ವೇಷ ಸಾಧನೆಗಾಗಿ ರೌಡಿಶೀಟರ್ ನಡು ರಸ್ತೆಯಲ್ಲೇ ಕೊಲೆಗಳು ನಡೆಯುತ್ತಿದ್ದು, ಸಿಲಿಕಾನ್ ಸಿಟಿಯ ಜನರು ಬೆಚ್ಚಿ ಬಿದ್ದಿದ್ದಾರೆ.

ಜೂನ್ 10ರಂದು ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಮಧ್ಯರಾತ್ರಿ 2:30ರ ಸುಮಾರಿಗೆ ರೌಡಿಶೀಟರ್ ಜಯಂತ್ (28) ಕೊಲೆ ಮಾಡಲಾಗಿತ್ತು. ತನಿಖೆ ಕೈಗೊಂಡಿರುವ ಪೊಲೀಸರಿಗೆ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ದೊರೆತಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಮದ್ಯ ಕುಡಿದು ಬೈಕ್‍ನಲ್ಲಿ ಹೋಗುತ್ತಿದ್ದ ಜಯಂತನಿಗೆ ಕಾರಿನಿಂದ ಡಿಕ್ಕಿ ಹೊಡೆದು ತಂಡ ಕೆಳಗೆ ಬೀಳಿಸಿತ್ತು. ಹತ್ತು ಜನರ ಗುಂಪೊಂದು ತಕ್ಷಣವೇ ಆತನ ಮೇಲೆ ಹಲ್ಲೆ ನಡೆಸಿ, ಕೊಚ್ಚಿ ಕೊಲೆ ಮಾಡಿ ಪರಾರಿಯಾದ ದೃಶ್ಯಗಳು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಓದಿ: ಮಧ್ಯರಾತ್ರಿ ನಡುರಸ್ತೆಯಲ್ಲಿಯೇ ಕೊಚ್ಚಿ ರೌಡಿಶೀಟರ್ ನ ಬರ್ಬರ ಹತ್ಯೆ!

ಕೊಲೆ ಮಾಡಿದ್ಯಾಕೆ?
ಹಳೆಯ ದ್ವೇಷ ಸಾಧನೆಗಾಗಿ ನಡೆದ ಕೃತ್ಯವಿದೆಂದು ತಡವಾಗಿ ಬೆಳಕಿಗೆ ಬಂದಿದೆ. ಮೂರು ವರ್ಷಗಳ ಹಿಂದೆ ರೌಡಿಶೀಟರ್ ಗಣೇಶ್ ಅನ್ನು ಹತ್ಯೆ ಮಾಡಿದ್ದ ಜಯಂತ್ ಜೈಲು ಸೇರಿದ್ದನು. ಅವರ ಮೇಲೆ ಸೇಡು ತೀರಿಸಿಕೊಳ್ಳಲು ರೌಡಿಶೀಟರ್ ಗಣೇಶ್ ಆಪ್ತ ರಾಮಚಂದ್ರ ಕಾಯುತ್ತಿದ್ದನು. ಜಯಂತ್ ಎರಡು ವಾರ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಜಯಂತ್ ಕೊಲೆಗೆ ಸಂಚು ನಡೆಸಿದ್ದ ರಾಮಚಂದ್ರ ಹಾಗೂ ಆತನ ಸಹಚರರು ಜೂನ್ 10ರ ಮಧ್ಯರಾತ್ರಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಪ್ರಮುಖ ರೂವಾರಿ ಆರೋಪಿ ರಾಮಚಂದ್ರ ಹಾಗೂ ಆತನ ಕೆಲವು ಸಹಚರರನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಉಳಿತ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೃತ ಜಯಂತ್ ವಿರುದ್ಧ ಕೊಲೆಗೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ ಒಟ್ಟು 8 ಪ್ರಕರಣ ದಾಖಲಾಗಿದ್ದವು. ಜಯಂತ್ ಮೇಲೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿತ್ತು.

Comments

Leave a Reply

Your email address will not be published. Required fields are marked *