ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!

ನವದೆಹಲಿ: ಭಾರತೀಯ ಮಾರುಕಟ್ಟೆಯನ್ನು (Indian Market) ಪ್ರವೇಶಿಸಲು ಟೆಸ್ಲಾ ತಯಾರಿ ನಡೆಸುತ್ತಿದೆ. ಈ ಸಂದರ್ಭದಲ್ಲೇ ಟೆಸ್ಲಾ (Tesla) ಬಿಡಿ ಭಾಗಗಳ ಪೂರೈಕೆದಾರರನ್ನು ಹುಡುಕುತ್ತಿದ್ದು ಟಾಟಾ ಗ್ರೂಪ್ (Tata Group) ಜೊತೆ ಪಾಲುದಾರಿಕೆ ಘೋಷಿಸುವ ಸಾಧ್ಯತೆಯಿದೆ.

ಟಾಟಾ ಗ್ರೂಪ್ ಕಂಪನಿಯ ಟಾಟಾ ಆಟೋಕಾಂಪ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಟೆಕ್ನಾಲಜೀಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿಗಳು ಟೆಸ್ಲಾದ ಪಾಲುದಾರರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

 

ಟೆಸ್ಲಾ ಕಾರ್ಯನಿರ್ವಾಹಕರು ಟಾಟಾ ಗ್ರೂಪ್‌ ಕಂಪನಿಗಳನ್ನು ಭೇಟಿಯಾಗಿ ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಬ್ರಿಕೇಶನ್ ವಸ್ತುಗಳ ಸಂಭಾವ್ಯ ಅಭಿವೃದ್ಧಿ ಮತ್ತು ತಯಾರಿಕೆಯ ಬಗ್ಗೆ ಚರ್ಚಿಸಿದ್ದಾರೆ.

ಒಂದು ವೇಳೆ ಈ ಮಾತುಕತೆಗಳು ಯಶಸ್ವಿಯಾದರೆ ಟಾಟಾಅಟೋಕಾಂಪ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಎಂಜಿನಿಯರಿಂಗ್‌ ಪ್ರೊಡಕ್ಟ್‌ ನೀಡಲಿದೆ. ಟಿಸಿಎಸ್‌ ಸರ್ಕ್ಯೂಟ್‌-ಬೋರ್ಡ್‌ ಟೆಕ್ನಾಲಜಿ ನೀಡಿದರೆ, ಟಾಟಾ ಎಲೆಕ್ಟ್ರಾನಿಕ್ಸ್‌ ಚಿಪ್‌ಗಳನ್ನು ಸಪ್ಲೈ ಮಾಡಲಿದೆ.

ಒಂದು ಡಜನ್‌ಗಿಂತಲೂ ಹೆಚ್ಚು ಭಾರತೀಯ ಕಂಪನಿಗಳು ಈಗಾಗಲೇ ಅಮೇರಿಕನ್ ಇವಿ ತಯಾರಕರಿಗೆ ನಿರ್ಣಾಯಕ ಘಟಕಗಳನ್ನು ಪೂರೈಸುತ್ತಿವೆ. ಇವುಗಳಲ್ಲಿ ಸಂವರ್ಧನ ಮದರ್‌ಸನ್, ಸುಪ್ರಜಿತ್ ಎಂಜಿನಿಯರಿಂಗ್, ಸೋನಾ ಬಿಎಲ್‌ಡಬ್ಲ್ಯೂ ಪ್ರಿಸಿಶನ್ ಫೋರ್ಜಿಂಗ್ಸ್, ವರ್ರೋಕ್ ಎಂಜಿನಿಯರಿಂಗ್, ಭಾರತ್ ಫೋರ್ಜ್ ಮತ್ತು ಸಂಧಾರ್ ಟೆಕ್ನಾಲಜೀಸ್ ಸೇರಿವೆ.

ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಟೆಸ್ಲಾ ಹಲವಾರು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸುತ್ತಿದೆ. ಇವುಗಳಲ್ಲಿ ರಾಜಸ್ಥಾನ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿವೆ.