ಸಚಿವರೊಬ್ಬರು ಕರೆ ಮಾಡಿ ನನ್ನನ್ನೇ ಕೇಳಿದ್ರು- ಅರವಿಂದ ಲಿಂಬಾವಳಿ

ಬೆಂಗಳೂರು: ಇತ್ತೀಚೆಗೆ 2 ಬಾರಿ ಸಚಿವರಾಗಿದ್ದವರು ದೂರವಾಣಿ ಕರೆ ಮಾಡಿ ನನ್ನನ್ನೇ ಕೇಳುವ ಮಟ್ಟಕ್ಕೆ ಬಂದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಎಷ್ಟರಮಟ್ಟಿಗೆ ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯ ರಾಜಕೀಯ ಬೆಳವಣಿಗೆಗಳನ್ನು ಕಂಡು ಈ ಷಡ್ಯಂತ್ರ ನಡೆಯುತ್ತಿದೆ. ನನ್ನ ವಿರುದ್ಧವೂ ಕಾಂಗ್ರೆಸ್-ಜೆಡಿಎಸ್ ನಾಯಕರಿಂದ ಷಡ್ಯಂತ್ರ ನಡೆಯುತ್ತಿದೆ. ಮೈತ್ರಿ ನಾಯಕರ ಜೊತೆ ನಮ್ಮ ಪಕ್ಷದ ಒಂದಿಬ್ಬರು ನಾಯಕರು ಕೈಜೋಡಿಸಿ ಸಂಚು ಮಾಡುತ್ತಿದ್ದಾರೆ. ಯಾವ ಷಡ್ಯಂತ್ರ ಎಂದು ಸಂದರ್ಭ ಬಂದಾಗ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಯಾವ ವಿಚಾರ ಎನ್ನುವುದನ್ನು ಲಿಂಬಾವಳಿ ಅವರು ಸ್ಪಷ್ಟವಾಗಿ ಹೇಳಲಿಲ್ಲ.

ವಿಶ್ವಾಸ ಮತವನ್ನು ಇಂದಾದರೂ ಮುಗಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಈಗಾಗಲೇ ಈ ಬಗ್ಗೆ ಸ್ಪೀಕರ್ ಅವರಿಗೆ ಪತ್ರ ಬರೆಯುವ ಮೂಲಕ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದ್ದೇವೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ರೀತಿಯ ಬೆಳವಣಿಗೆಗಳನ್ನು ರಾಜ್ಯದ ಆಡಳಿತಾರೂಢ ಸರ್ಕಾರ ಮಾಡುತ್ತಿದೆ ಎಂದರು.

ಶಾಸಕರಿಗೆ ಹೆದರಿಸುವುದು, ಬಿಜೆಪಿ ಶಾಸಕರಿಗೆ ಆಮಿಷ ತೋರಿಸುವ ಕೆಲಸವನ್ನೂ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಇಂದು ಇದನ್ನು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಸದನದ ಬೆಳವಣಿಗೆ ನೋಡಿ ನಾಳೆ ತೆಗೆದುಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸುವುದಾಗಿ ಕೋರ್ಟ್ ಹೇಳಿದೆ ಎಂದು ಅವರು ತಿಳಿಸಿದರು.

ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇನ್ನಾದರೂ ವಾಮಮಾರ್ಗಗಳನ್ನು ಬಿಟ್ಟು ಸದನದೊಳಗೆ ತಮ್ಮ ವಿಶ್ವಾಸ ಮತವನ್ನು ಕೇಳಬೇಕು ಎಂದು ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *