ಸೋದರಿಯನ್ನೇ ಕೊಲೆ ಮಾಡಿ ನೇಣು ಹಾಕ್ದ

ಹೈದರಾಬಾದ್: ಚಿನ್ನದ ಆಭರಣಗಳನ್ನು ಕೊಡಲಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ಚಂದನಗರದಲ್ಲಿ ನಡೆದಿದೆ.

ಆರ್.ಸೀತಾಲಕ್ಷ್ಮಿ (42) ಮೃತ ಸಹೋದರಿ. ಆರೋಪಿ ಆರ್. ರಮಣ ರಾವ್ (36) ಸೆರಿಲಿಂಗಂಪಲ್ಲಿ ಗ್ರಾಮದವನಾಗಿದ್ದು, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಲಕ್ಷ್ಮಿ ಪತಿಯಿಂದ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮೃತ ಮಹಿಳೆಯ ಚಿಕ್ಕಪ್ಪನ ಮಗನಾಗಿದ್ದ ರಾವ್ ಕುಡಿತದ ಚಟಕ್ಕೆ ದಾಸನಾಗಿದ್ದನು. ಪ್ರತಿದಿನ ಮದ್ಯ ಸೇವಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾವ್ ಕಂಠ ಪೂರ್ತಿ ಕುಡಿದು ಬಂದು ಲಕ್ಷ್ಮಿಯ ಚಿನ್ನಾಭರಣವನ್ನು ಕೇಳಿದ್ದಾನೆ. ಆದರೆ ಲಕ್ಷ್ಮಿ ಚಿನ್ನಾಭರಣ ಕೊಡಲು ನಿರಾಕರಿಸಿದ್ದು, ಇದರಿಂದ ಕೋಪಕೊಂಡ ಆರೋಪಿ ಕುಡಿದ ಮತ್ತಿನಲ್ಲಿ ಸಹೋದರಿಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆಯನ್ನು ನೇಣು ಹಾಕಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾನೆ. ಆದರೆ ಮೃತ ಮಹಿಳೆಯ ಸಹೋದರ ಶಿವಕುಮಾರ್‍ಗೆ ಸಾವಿನ ಬಗ್ಗೆ ಅನುಮಾನ ಮೂಡಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅನುಮಾನಾಸ್ಪದ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇತ್ತ ಲಕ್ಷ್ಮಿಯನ್ನು ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿದುಬಂದಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ರಾವ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *