ಉಡುಪಿ| ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಉಡುಪಿ: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಡುಪಿ ನಗರದ ಹಳೆ ಬಸ್ ನಿಲ್ದಾಣ ಬಳಿ ನಡೆದಿದೆ.

ಕೃಷ್ಣಕೃಪಾ ಕಾಂಪ್ಲೆಕ್ಸ್‌ನ ಅಂಗಡಿ ಕೋಣೆಯಲ್ಲಿ ಘಟನೆ ನಡೆದಿದ್ದು, ಕೊರಂಗ್ರಪಾಡಿ ನಿವಾಸಿ ಪ್ರಶಾಂತ ಶೆಟ್ಟಿ (36) ಕೊಲೆಯಾಗಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ನಿವಾಸಿ ಈರಣ್ಣ ಕೊಲೆ ಆರೋಪಿ.

ಯಾವುದೋ ಕಾರಣಕ್ಕೆ ಕ್ಷುಲ್ಲಕ ಗಲಾಟೆಯಿಂದ ಜಗಳ ಆರಂಭವಾಗಿದೆ. ಬಳಿಕ ಹರಿತವಾದ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಕೊಲೆ ಕೃತ್ಯ ನಡೆಸಿದ ಬಳಿಕ ಪೊಲೀಸರಿಗೆ ಕರೆ ಮಾಡಿ ಆರೋಪಿ ತಿಳಿಸಿದ್ದಾನೆ.

ಆರೋಪಿ ಈರಣ್ಣನನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರಿಗೂ ವಿಪರೀತ ಕುಡಿತದ ಚಟವಿತ್ತು. ಸಾಲದ ವಿಚಾರದಲ್ಲಿ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.