ಜಗಳವಾಡಿ ನಾಲ್ಕು ಮಕ್ಕಳ ತಾಯಿಯ ಹತ್ಯೆಗೈದ ಲವ್ವರ್ – ಕೆಟ್ಟು ನಿಂತಿರೋ ಆಟೋದಲ್ಲಿ ಹೆಣ ಬಿಸಾಕಿ ಎಸ್ಕೇಪ್

ಬೆಂಗಳೂರು: ಜಗಳ ವಿಕೋಪಕ್ಕೆ ತಿರುಗಿ ನಾಲ್ಕು ಮಕ್ಕಳ ತಾಯಿಯನ್ನ ಪ್ರಿಯಕರ ಕೊಲೆ ಮಾಡಿ, ಬಳಿಕ ಕೆಟ್ಟು ನಿಂತಿರೋ ಆಟೋದಲ್ಲಿ ಹೆಣ ಬಿಸಾಕಿ ಎಸ್ಕೇಪ್ ಆಗಿರುವ ಘಟನೆ ತಿಲಕ್ ನಗರ ಮುಖ್ಯರಸ್ತೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಸಲ್ಮಾ (35) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಸುಬ್ಬುಮಣಿ ಎನ್ನಲಾಗಿದ್ದು, ತಿಲಕ್ ನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಮೃತ ಸಲ್ಮಾಗೆ ಮದುವೆಯಾಗಿ, ನಾಲ್ವರು ಮಕ್ಕಳಿದ್ದರು. ಗಂಡ ಮೃತಪಟ್ಟ ಬಳಿಕ ಸುಬ್ಬುಮಣಿ ಎಂಬಾತನ ಜೊತೆ ಸಲುಗೆಯಿಂದ ಇದ್ದರು. ಶುಕ್ರವಾರ (ಅ.24) ರಾತ್ರಿ ಇಬ್ಬರು ನಡುವೆ ಗಲಾಟೆಯಾಗಿದ್ದು, ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ, ಕೆಟ್ಟು ನಿಂತಿರೋ ಆಟೋದಲ್ಲಿ ಬಿಸಾಡಿ ಪರಾರಿಯಾಗಿದ್ದಾನೆ.

ಶನಿವಾರ (ಅ.25) ಸಂಜೆ ನಾಲ್ಕು ಗಂಟೆ ಸುಮಾರಿಗೆ ಸ್ಥಳೀಯರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸೋಕೋ ಟೀಂ ಹಾಗೂ ತಿಲಕ್ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.