ಬೇರೆ ಯುವಕರಿಂದ ಫೋನ್‌ಕಾಲ್‌ – ಪ್ರಶ್ನಿಸಿದ್ದಕ್ಕೆ ಕಾನ್ಸ್ಟೇಬಲ್‌ ಪ್ರಿಯಕರನನ್ನೇ ಬೆಂಕಿ ಹಚ್ಚಿ ಕೊಂದ ರಾಣಿ

ಬೆಂಗಳೂರು: ಬೇರೆ ಯುವಕರಿಂದ ಬರುತ್ತಿದ್ದ ಫೋನ್‌ ಕಾಲ್‌ಗಳ (Phone Call) ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಿಯತಮೆಯೊಬ್ಬಳು ತನ್ನ ಕಾನ್‌ಸ್ಟೇಬಲ್‌ ಪ್ರಿಯಕರನನ್ನೇ ಬೆಂಕಿಹಚ್ಚಿ ಕೊಂದಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ (Puttenahalli Police Station) ವ್ಯಾಪ್ತಿಯಲ್ಲಿ ನಡೆದಿದೆ.

ಕಾನ್ ಸ್ಟೇಬಲ್ ಸಂಜಯ್‌ ಮೃತ ವ್ಯಕ್ತಿ, ರಾಣಿ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ (Lover). ಸಂಜಯ್‌ ತನ್ನ ಪ್ರಿಯತಮೆ ರಾಣಿ ಮನೆಗೆ ಹೋಗಿದ್ದಾಗ, ಅದೇ ಸಮಯಕ್ಕೆ ಯುವಕನೊಬ್ಬ ಕರೆ ಮಾಡಿದ್ದಾನೆ. ನಂತರ ಸಂಜಯ್‌ ಆಕೆಯ ಮೊಬೈಲ್‌ ತೆಗೆದು ನೋಡಿದಾಗ ಬೇರೆ ಯುವಕರ ಜೊತೆಗೂ ಮಾತನಾಡಿರುವುದು ಗೊತ್ತಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ದೊಡ್ಡದಾಗಿದೆ.

ನಂತರ ರಾಣಿಯೊಂದಿಗೆ ಜಗಳವಾಡಿಕೊಂಡು ಹೊರಗೆ ಹೋಗಿದ್ದ ಸಂಜಯ್‌ ಪೆಟ್ರೋಲ್‌ನೊಂದಿಗೆ (Petrol) ಪ್ರತ್ಯಕ್ಷವಾಗಿದ್ದಾನೆ. ರಾಣಿಯನ್ನ ಹೆದರಿಸುವ ಸಲುವಾಗಿ ಪೆಟ್ರೋಲ್‌ ಮೈಮೇಲೆ ಸುರಿದುಕೊಂಡು ನಾನೇ ಸಾಯ್ತೀನಿ ಅಂತ ಹೆದರಿಸಿದ್ದಾನೆ. ಅದಕ್ಕೆ ನೀನೇನು ಸಾಯೋದು ನಾನೇ ಸಾಯಿಸ್ತೀನಿ ಅಂತ ರಾಣಿ ಬೆಂಕಿ ಕಡ್ಡಿ ಕೀರಿದ್ದಾಳೆ. ಆಗ ಬೆಂಕಿಯ ಸಣ್ಣ ಕಿಡಿ ಸಂಜಯ್‌ಗೆ ತಗುಲಿ ದೇಹಕ್ಕೆಲ್ಲಾ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಪ್ರಿಯತಮೆ ನೀರು ಹಾಕಿ ಬೆಂಕಿ ಆರಿಸಿದ್ದಾಳೆ. ಬಳಿಕ ಬೈಕ್‌ನಲ್ಲಿ ತಾನೇ ಸಂಜಯ್‌ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಸಂಜಯ್‌ ಸಾವನ್ನಪ್ಪಿದ್ದಾನೆ.

ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಡೀಪ್‌ಫೇಕ್‌, ಡಾರ್ಕ್‌ವೆಬ್‌ ಕಡಿವಾಣಕ್ಕೆ CID ಮಾಸ್ಟರ್‌ ಪ್ಲ್ಯಾನ್‌ – ದೇಶದಲ್ಲೇ ದಿ ಬೆಸ್ಟ್‌ ಸೈಬರ್ ಟೆಕ್ನಾಲಜಿ ಎಂಬ ಹೆಮ್ಮೆ

ಸಂಜಯ್‌-ರಾಣಿ ಪರಸ್ಪರ ಪ್ರೀತಿಸುತ್ತಿದ್ದರು: ಕಾನ್ಸ್ಟೇಬಲ್ ಸಂಜಯ್ ಮತ್ತು ಹೋಂಗಾರ್ಡ್ ರಾಣಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಬಸವನಗುಡಿ ಠಾಣೆಯಲ್ಲಿ ಕೆಲಸ ಮಾಡ್ತಿದ್ರು. ಆಗಲೇ ಪರಸ್ಪರ ಪ್ರೇಮವಾಗಿತ್ತು. ಕೆಲ ತಿಂಗಳವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಇತ್ತೀಚೆಗೆ ರಾಣಿ ಸಂಜಯ್‌ನನ್ನ ದೂರ ಮಾಡೋಕೆ ಶುರು ಮಾಡಿದ್ದಳು. ಸಂಜಯ್‌ಗೆ ಮದುವೆಯಾಗಿ ಮಕ್ಕಳಿದ್ದಾರೆ ಅಂತಾ ದೂರ ಮಾಡೋಕೆ ಶುರು ಮಾಡಿದ್ದಾಳೆ. ಬುಧವಾರ ರಾತ್ರಿ ರಾಣಿಯ ಮನವೊಲಿಸಲು ಸಂಜಯ್‌ ಹೋದಾಗಲೇ ಇಬ್ಬರ ಮಧ್ಯೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದು, ಡಿಕೆಶಿಯ ಶಾಸಕರ ಪಟ್ಟಿಗೆ ಹೈಕಮಾಂಡ್‌ ಬ್ರೇಕ್‌ – ದೆಹಲಿ ಸಭೆಯ ಇನ್‌ಸೈಡ್‌ ಸ್ಟೋರಿ