ಬಿಜೆಪಿಯನ್ನು ಜಿರಳೆಗೆ ಹೋಲಿಸಿ ಟಾಂಗ್ ಕೊಟ್ಟ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಜಯಗಳಿಸಲು ಸಾಧ್ಯವೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ. ಮತ್ತೆ ಅಧಿಕಾರಕ್ಕೆ ಬಿಜೆಪಿ ಏರಲ್ಲ. ಬಿಜೆಪಿಯ ಹೇಳಿಕೆ ಹೇಗಿದೆ ಎಂದರೆ, ನವಿಲಿನ ಗರಿಗಳನ್ನು ಧರಿಸಿದ ಜಿರಳೆಯೊಂದು ನಾನು ನವಿಲು ಆಗಲಿದ್ದೇನೆ ಎನ್ನುವ ಕನಸನ್ನು ಕಂಡಂತೆ ಇದೆ ಎಂದು ವ್ಯಂಗ್ಯವಾಗಿ ಹೋಲಿಸಿ ಟಾಂಗ್ ಕೊಟ್ಟಿದ್ದಾರೆ.

26 ಲಕ್ಷ ಮತದಾರರು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತ್ರಿಪುರಾದದಲ್ಲಿ ಬಿಜೆಪಿ ಜಯಗಳಿಸಿದ್ದರಿಂದ ಹಿನ್ನಡೆ ಆಗಿಲ್ಲ. ಸಿಪಿಎಂ ಪರವಾಗಿ ಮತದಾನವಾಗಿದ್ದರೂ 5% ಮತಗಳ ವ್ಯತ್ಯಾಸದಿಂದಾಗಿ ಬಿಜೆಪಿ ಗೆದ್ದಿದೆ ಎಂದರು.

ತ್ರಿಪುರಾದಲ್ಲಿ ಗೆದ್ದಂತೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಮುಂದಿನ ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಗುಜರಾತ್ ನಲ್ಲಿ ಈಗಾಗಲೇ ನೈತಿಕವಾಗಿ ಸೋತಿದೆ ಎಂದು ಹೇಳಿದರು.

ಒಂದು ವೇಳೆ ರಾಹುಲ್ ಗಾಂಧಿ ನನ್ನ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರೆ ಫಲಿತಾಂಶ ಬೇರೆಯದ್ದೇ ಆಗಿರುತಿತ್ತು. ಕಾಂಗ್ರೆಸ್ 30, ಟಿಎಂಸಿ 14, ಇತರೆ ಪಕ್ಷಗಳ 16 ಮಂದಿಗೆ ಟಿಕೆಟ್ ನೀಡಬೇಕು ಎಂದು ನಾನು ಹೇಳಿದ್ದೆ. ನನ್ನ ಈ ಪ್ರಸ್ತಾಪನ್ನು ಕೈ ನಾಯಕರು ಒಪ್ಪಿಕೊಳ್ಳದ ಕಾರಣ ಈ ಫಲಿತಾಂಶ ಬಂದಿದೆ ಎಂದರು.

ಕಾಂಗ್ರೆಸ್ ಕೇವಲ 1.5% ಮತಗಳನ್ನು ಪಡೆದಿದ್ದು `ಶೇಮ್’ ಎಂದರು. ಕೇಂದ್ರಿಯ ಪಡೆ ಮತ್ತು ಹಣ ಬಲವನ್ನು ಉಪಯೋಗಿಸಿ ಬಿಜೆಪಿ ಈ ಚುನಾವಣೆಯನ್ನು ಗೆದ್ದಿದೆ ಎಂದು ಮಮತಾ ದೂಷಿಸಿದರು.

ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ ಬಳಿಕ ದೆಹಲಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಬಿಜೆಪಿಯ ಸುವರ್ಣ ಯುಗ ಆರಂಭವಾಗಿದ್ಯಾ ಎಂದು ಪ್ರಶ್ನೆ ಕೇಳಿದ್ದಕ್ಕೆ, ಪಶ್ಚಿಮ ಬಂಗಾಳ, ಕೇರಳ ಒಡಿಶಾದಲ್ಲಿ ಯಾವಾಗ ಕಮಲ ಅರಳುತ್ತದೋ ಆಗ ನಾನು ನಮ್ಮ ಪಕ್ಷದ ಸುವರ್ಣ ಯುಗವೆಂದು ಭಾವಿಸುತ್ತೇನೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: 2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?

Comments

Leave a Reply

Your email address will not be published. Required fields are marked *