ಅಪ್ಪ-ಅಮ್ಮನ ಸ್ಮಾರಕ ಸೇರಿಸಿ ಎಲ್ಲೂ ಇಲ್ಲದ ಯೋಗ ಕೇಂದ್ರ ನಿರ್ಮಾಣ ಮಾಡ್ತೀವಿ: ರಾಘವೇಂದ್ರ ರಾಜ್‍ಕುಮಾರ್

ಬೆಂಗಳೂರು: ಇಂದು ವರನಟ ಡಾ. ರಾಜ್‍ಕುಮಾರ್ ಅವರ 12ನೇ ವರ್ಷದ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಿಸಲು ಕುಟುಂಬವರ್ಗ ನಿರ್ಧರಿಸಿದೆ.

ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಡಾ.ರಾಜ್ ಅವರ ಹಿರಿಯ ಪುತ್ರಿ ಲಕ್ಷ್ಮಿ ಕುಟುಂಬಸ್ಥರು ಬೆಳಗ್ಗೆ 9 ಗಂಟೆಗೆ ಕಂಠೀರವ ಸ್ಟುಡಿಯೋ ಬಳಿ ಇರುವ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಇತ್ತೀಚಿಗೆ ಮದುವೆ ಆದ ನವದಂಪತಿ ಷಣ್ಮುಖ ಹಾಗೂ ಅವರ ಪತ್ನಿ ಸಿಂಧು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಅಪ್ಪಾಜಿಯನ್ನು ತುಂಬಾ ಮಿಸ್ ಮಾಡ್ಕೋತ್ತೀವಿ. ಅಪ್ಪ-ಅಮ್ಮನ ಸ್ಮಾರಕ ಸೇರಿಸಿ ಯೋಗ ಕೇಂದ್ರ ನಿರ್ಮಾಣ ಮಾಡ್ತೀವಿ. ಪ್ರಪಂಚದಲ್ಲಿ ಇದುವರೆಗೂ ಎಲ್ಲೂ ಇಲ್ಲದ ರೀತಿ ಯೋಗ ಕೇಂದ್ರ ನಿರ್ಮಾಣ ಆಗುತ್ತೆ. ಅಭಿಮಾನಿಗಳಲ್ಲಿ ಅಪ್ಪಾಜಿಯನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.

ಅಪ್ಪಾಜಿ ಮತ್ತು ಅಮ್ಮನ ತಿಥಿ ಒಂದೇ ವರ್ಷ ಮಾಡಬಾರದು. ಹೀಗಾಗಿ ಸಮಾಧಿಯಲ್ಲಿ ಅಪ್ಪಾಜಿ ಪೂಜೆ ಮಾಡುತ್ತೇವೆ. ಮನೆಯಲ್ಲಿ ಈ ವರ್ಷ ಪೂಜೆ ಮಾಡುವುದಿಲ್ಲ ಎಂದು ರಾಘವೇಂದ್ರ ರಾಜ್‍ಕುಮಾರ್ ಹೇಳಿದರು.

ರಾಜ್ ಪುಣ್ಯಸ್ಮರಣೆಗೆ ನೀತಿ ಸಂಹಿತೆ ಎಫೆಕ್ಟ್ ತಟ್ಟಿದ್ದು, ಹಾಗಾಗಿ ಸರಳವಾಗಿ ಪುಣ್ಯಸ್ಮರಣೆ ಆಚರಿಸಲು ಕಂಠೀರವ ಸ್ಟುಡಿಯೋ ಸಿಬ್ಬಂದಿ ನಿರ್ಧಾರ ಮಾಡಿದ್ದರು. ಪ್ರತಿ ವರ್ಷ ಸುಮಾರು 3 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಬಂದಿರೋದರಿಂದ ರಾಜ್ ಕುಮಾರ್ ಪುಣ್ಯಸ್ಮರಣೆಯನ್ನು ಶಾಮಿಯಾನ, ಊಟದ ವ್ಯವಸ್ಥೆ ಇಲ್ಲದೆ ಮಾಡಲಾಗುತ್ತಿದೆ.

Comments

Leave a Reply

Your email address will not be published. Required fields are marked *