ಟಿಪ್ಪು ಜಯಂತಿ ಹೆಸರಲ್ಲಿ ಬಿಜೆಪಿಗೆ ಬಿಗ್ ಶಾಕ್ – ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ

ಬೆಂಗಳೂರು,ಗದಗ : ಬಿಜೆಪಿಯಲ್ಲೀಗ ಹೆಸರು ಪ್ರಿಂಟ್ ಪಾಲಿಟಿಕ್ಸ್ ಶುರುವಾಗಿದೆ. ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ಹೆಸರು ಪ್ರಿಂಟ್ ಆದವರದ್ದು ಒಂದು ರಾಜಕಾರಣ, ಆಗದಿದ್ದವರದ್ದು ಒಂದು ರಾಜಕಾರಣ. ಇಬ್ಬರನ್ನು ಕಾದಾಟಕ್ಕಿಳಿಸಿ ಸಿಎಂ ಸಿದ್ದರಾಮಯ್ಯ ರಾಜಕೀಯದ ಚದುರಂಗದಲ್ಲಿ ದಾಳವನ್ನ ಸಖತ್ತಾಗೇ ನಡೆಸ್ತಿದ್ದಾರೆ.

ಟಿಪ್ಪು ಜಯಂತಿ ವಿರೋಧಿಸಿ ಜಯಂತಿ ಕಾರ್ಯಕ್ರಮದಲ್ಲಿ ನಮ್ಮ ಹೆಸರು ಹಾಕಬೇಡಿ ಅಂತಾ ಬಿಜೆಪಿ ಸಂಸದರು ಅಧಿಕೃತವಾಗಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ರು. ಆದ್ರೆ, ಸಿಎಂ ಪತ್ರ ಬರೆದವರನ್ನ ಬಿಟ್ಟು ಪತ್ರ ಬರೆಯದವರ ಹೆಸರು ಹಾಕಿಸಿ ಬಿಜೆಪಿಯಲ್ಲೇ ಕಿಡಿ ಹಚ್ಚಿದ್ದಾರೆ.

ಇಂದು ಮತ್ತಷ್ಟು ತಾರಕಕ್ಕೇರಲಿದೆ ಕಾಂಗ್ರೆಸ್, ಬಿಜೆಪಿ ಟಿಪ್ಪು ರಾಜಕೀಯ. ಪ್ರತಿಷ್ಠೆ, ವಿರೋಧದ ಮಧ್ಯೆ ಇಂದು ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ನಡೀತಿದೆ. ಕಾಂಗ್ರೆಸ್ ಸಂಭ್ರಮಕ್ಕೆ ಕರೆಕೊಟ್ರೆ, ಪ್ರತಿಭಟನೆಗೆ ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಟಿಪ್ಪು ಹೆಸರಲ್ಲಿ ಇವತ್ತು ರಾಜ್ಯದಲ್ಲಿ ಪ್ರತಿಷ್ಠೆಯ ಹೋರಾಟ ನಡೆಯಲಿದೆ ಹಾಗಾಗಿನೇ ಕೊಡಗು, ಮಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ, ಯಾದಗಿರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದಾಗಿ ಆಯಾ ಜಿಲ್ಲಾಡಳಿತ ಎಚ್ಚರಿಕೆ ರವಾನಿಸಿದೆ. ಕೊಡಗಿನಲ್ಲಿ ಹೆಚ್ಚುವರಿ ಭದ್ರತೆಗಾಗಿ ತಮಿಳುನಾಡು, ಆಂಧ್ರ ಪ್ರದೇಶದ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ತುಕಡಿಗಳನ್ನ ನಿಯೋಜಿಸಲಾಗಿದೆ.

ಸರ್ಕಾರ ಟಿಪ್ಪು ಜಯಂತಿಯನ್ನ ಆಚರಿಸಿದ ಮೊದಲ ವರ್ಷ ಅಂದ್ರೆ 2015ರಲ್ಲಿ ಮಡಿಕೇರಿ ಹೊತ್ತಿ ಉರಿದಿತ್ತು. ಸಂಘ ಪರಿವಾರದ ಕಾರ್ಯಕರ್ತ ಕುಟ್ಟಪ್ಪ ಸಾವನ್ನಪ್ಪಿದ್ದರು. ಅಲ್ಲದೆ, ಮುಸ್ಲಿಂ ಯುವಕ ಸಾಹುಲ್‍ಗೆ ಗುಂಡಿಟ್ಟು ಕೊಲ್ಲಲಾಗಿತ್ತು. ಇದರಿಂದ ಮತ್ತಷ್ಟು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೊಡಗಿನಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಇದೆಲ್ಲದರ ಮಧ್ಯೆ ಮಂಗಳೂರಲ್ಲಿ ಮಾತನಾಡಿರೋ ಯಡಿಯೂರಪ್ಪ ಟಿಪ್ಪು ಜಯಂತಿ, ಹಿಟ್ಲರ್ ಜಯಂತಿ ಎರೂ ಒಂದೇ ಅಂತ ಕಿಡಿಕಾರಿದ್ದಾರೆ.

ಇನ್ನು ಟಿಪ್ಪು ಜಯಂತಿ ಅಂಗವಾಗಿ ಗದಗ ಬೆಟಗೇರಿ ಅವಳಿ ನಗರದ ಪ್ರಮುಖ ವೃತ್ತಗಳಲ್ಲಿ ಹಾಕಲಾಗಿರುವ ಬ್ಯಾನರ್ ಕಾಯಲೆಂದೆ ಪ್ರತ್ಯೇಕ ಪೊಲೀಸ್ ಸಿಬ್ಬಂದಿಗಳನ್ನ ನೇಮಕ ಮಾಡಾಗಿದೆ. ನಗರದ ಟಿಪ್ಪು ಸರ್ಕಲ್, ಭೂಮರಡ್ಡಿ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಓಲ್ಡ್ ಡಿಸಿ ಆಫಿಸ್ ಸರ್ಕಲ್, ಝೆಂಡಾ ಸರ್ಕಲ್, ಮುಳಗುಂದ ನಾಕಾ ಸೇರಿದಂತೆ ಅನೇಕ ಭಾಗದಲ್ಲಿ ಬ್ಯಾನರ್ ಗಳನ್ನು ಹಾಕಲಾಗಿದೆ.

ಕಿಡಿಗೇಡಿಗಳು ಸುಟ್ಟುಹಾಕುವುದು, ಹರಿಯುವುದು, ಸಗಣಿ ಎರಚುವ ಕೆಲಸ ಮಾಡ್ತಾರೆ ಅಂತ ಬ್ಯಾನರ್‍ಗಳಿಗೂ ಸೆಕ್ಯೂರಿಟಿ ಕೊಡಲಾಗಿದೆ. ಆ ಎಲ್ಲಾ ಬ್ಯಾನರ್ ರಾತ್ರಿ ಇಡೀ ಕಾಯಲೆಂದೆ ಒಂದೊಂದು ಬ್ಯಾನರ್ ಗೆ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ನಿಯೋಜನೆ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *