ಮಹಾರಾಷ್ಟ್ರ, ಬಿಹಾರದಲ್ಲಿ ಕೊರೊನಾಗೆ ಬಲಿ- ದೇಶದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಮುಂಬೈ: ಮಹಾರಾಷ್ಟ್ರದಲ್ಲಿ 63 ವರ್ಷದ ವ್ಯಕ್ತಿ ಹಾಗೂ ಬಿಹಾರದಲ್ಲಿ 38 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಕೋವಿಡ್-19 ಮಹಾರಾಷ್ಟ್ರದಲ್ಲಿ 2ನೇ ಹಾಗೂ ಬಿಹಾರದಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಭಾರತದಲ್ಲಿ ಒಟ್ಟು ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಈ ಸಂಬಂಧ ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ನಿನ್ನೆ ರಾತ್ರಿ ಮೃತ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ್ದು, ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಜೊತೆಗೆ ರೋಗಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಇದ್ದವು ಎಂದು ತಿಳಿಸಿದೆ.

ಬಿಹಾರದ 38 ವರ್ಷದ ವ್ಯಕ್ತಿ ಕತಾರ್ ದಿಂದ ಇತ್ತೀಚೆಗೆ ತಮ್ಮ ಗ್ರಾಮಕ್ಕೆ ವಾಪಸ್ ಆಗಿದ್ದರು. ಆದರೆ ಕೊರೊನಾ ಸೋಂಕು ತಗುಲಿದ್ದು ದೃಢವಾಗಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದಾರೆ.

ಮಾರ್ಚ್ 19ರಂದು ಕೊರೊನಾ ವೈರಸ್‍ಗೆ ನಾಲ್ಕನೇ ವ್ಯಕ್ತಿ ಪಂಜಾಬ್‍ನಲ್ಲಿ ಬಲಿಯಾಗಿದ್ದರು. 72 ವರ್ಷದ ವ್ಯಕ್ತಿ ಮಾರಕ ರೋಗದಿಂದ ಪ್ರಾಣ ಬಿಟ್ಟಿದ್ದರು. ಈ ವ್ಯಕ್ತಿಯು ಇತ್ತೀಚಿಗಷ್ಟೇ ಜರ್ಮನಿ ಮತ್ತು ಇಟಲಿಯಿಂದ ಸ್ವದೇಶಕ್ಕೆ ವಾಪಸ್ ಆಗಿದ್ದರು ಎಂದು ತಿಳಿದು ಬಂದಿತ್ತು.

ಮಾರಕ ಕೊರೊನಾಗೆ ಕರ್ನಾಟಕದ ಕಲಬುರಗಿ ವ್ಯಕ್ತಿ ಮೊದಲ ಬಲಿಯಾಗಿದ್ದರು. ಇದಾದ ಬಳಿಕ ಈವರೆಗೆ ಒಟ್ಟು 4 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಇಂದು ಇಬ್ಬರು ವ್ಯಕ್ತಿಗಳು ಮೃತಪಡುವುದರೊಂದಿಗೆ ಈ ಸಂಖ್ಯೆ ಈಗ ಆರಕ್ಕೆ ಏರಿದೆ.

Comments

Leave a Reply

Your email address will not be published. Required fields are marked *