ತುಮಕೂರು: ದೇಶವನ್ನು ಒಗ್ಗೂಡಿಸುವ ನೆಪದಲ್ಲಿ ಕಾಂಗ್ರೆಸ್ ಬಲವರ್ಧನೆಗಾಗಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ತುಮಕೂರು (Tumkur) ಜಿಲ್ಲೆ ಹಾದು ಹೋಗುತಿದ್ದಂತೆ, ಕಾಂಗ್ರೆಸ್ ಚೋಡೋ ಕಾರ್ಯಕ್ರಮವೂ ಜೋರಾಗಿದೆ. ಕಾಂಗ್ರೆಸ್‍ನ ಪ್ರಭಾವಿ ನಾಯಕ ಮಾಜಿ ಸಂಸದ ಮುದ್ದಹನುಮೇಗೌಡ (Mudda Hanume Gowda) ಕಾಂಗ್ರೆಸ್ (Congress) ತೊರೆದು ಬಿಜೆಪಿ (BJP) ವೇದಿಕೆಯಲ್ಲಿ ಹೆಚ್ಚಿಗೆ ಕಾಣಿಸಿಕೊಂಡು ಕಾಂಗ್ರೆಸ್‍ಗೆ ಶಾಕ್ ಕೊಟ್ಟಿದ್ದಾರೆ.
ಮೂರು ದಿನಗಳ ಕಾಲ ಭಾರತ್ ಜೋಡೋ ಪಾದಯಾತ್ರೆ ತುಮಕೂರು ಜಿಲ್ಲೆಯಲ್ಲಿ ಸಂಚರಿಸಿ ಸೋಮವಾರ ಮಧ್ಯಾಹ್ನದ ವೇಳೆಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಿತ್ತು. ಆದರೆ ಇತ್ತ ತುಮಕೂರಿನಲ್ಲಿ ನಡೆದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ಭಾಗಿಯಾಗಿ ಸುರೇಶ್ ಗೌಡರ ಗುಣಗಾನ ಮಾಡುವುದರ ಜೊತೆಗೆ ಬಿಜೆಪಿಯನ್ನೂ ಹೊಗಳಿದರು.

ಕಾಂಗ್ರೆಸ್ ತೊರೆದ ಮುದ್ದಹನುಮೇಗೌಡ ಬಿಜೆಪಿಗೆ ಸೇರಿಲ್ಲ. ಭಾರತ್ ಜೋಡೋ ಪಾದಯಾತ್ರೆ ನೆಪದಲ್ಲಾದರೂ ಮುದ್ದಹನುಮೇಗೌಡ ಕಾಂಗ್ರೆಸ್ ಮೇಲಿನ ಮುನಿಸು ಕಡಿಮೆಯಾಗಿ ಪಕ್ಷದಲ್ಲೇ ಉಳಿಯಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಿದ ಮುದ್ದಹನುಮೇಗೌಡ ಇತ್ತ ಸುರೇಶ್ ಗೌಡರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರೆ, ಅತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ಮೂಲಕ ಭಾರತ್ ಜೋಡೋ ವೇಳೆ ಕಾಂಗ್ರೆಸ್ ಚೋಡೋ ಮಾಡಿ ಶಾಕ್ ಕೊಟ್ಟಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಜೋಡೋ ಮಾಡಲು ವಿಫಲವಾದ ಭಾರತ್ ಜೋಡೋ-ಭಾರತ್ ಜೋಡೋ ಮೂಲಕ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಂದಾಗ ಬಹುದು ಎಂದುಕೊಳ್ಳಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವ ಟಿ.ಬಿ.ಜಯಚಂದ್ರರ ನಡುವಿನ ಶೀತಲ ಸಮರ ಹಾಗೇ ಮುಂದುವರಿದಿದೆ. ಜೋಡೋ ಪಾದಯಾತ್ರೆಯಲ್ಲಿ ಈ ನಾಯಕರು ಅಷ್ಟಾಗಿ ಒಬ್ಬರಿಗೊಬ್ಬರು ಸ್ಪಂದಿಸದೇ ಇರೋದು ಕಂಡುಬಂತು. ಇದನ್ನೂ ಓದಿ: ಮೊರಾರ್ಜಿ ದೇಸಾಯಿ ಶಾಲೆಯಲ್ಲಿ RSS ಶಿಬಿರಕ್ಕೆ ಅವಕಾಶ ಆರೋಪ- ಅನುಮತಿ ಕೊಟ್ಟಿಲ್ಲ ಎಂದ ಕೋಟಾ

ಮುದ್ದಹನುಮೇಗೌಡ ಎಂಟ್ರಿಯಿಂದ ಬಿಜೆಪಿಗೆ ಬಲ- ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಆದ ಮುದ್ದಹನುಮೇಗೌಡ ಬಿಜೆಪಿಗೆ ಎಂಟ್ರಿ ಕೊಟ್ಟರೆ ತುಮಕೂರು ಗ್ರಾಮಾಂತರ, ತುರುವೇಕೆರೆ ಹಾಗೂ ಕುಣಿಗಲ್ ಭಾಗದಲ್ಲಿ ಬಿಜೆಪಿ ಇನ್ನಷ್ಟು ಬಲಗೊಳ್ಳಲಿದೆ. ಈ ಭಾಗದಲ್ಲಿ ಒಕ್ಕಲಿಗರ ಮತ ಹೆಚ್ಚಾಗಿರುವುದರಿಂದ ಆ ಸಮುದಾಯದ ಮತ ಸೆಳೆಯಲು ಗೌಡರ ಎಂಟ್ರಿ ಬಿಜೆಪಿಗೆ ಅನುಕೂಲ ಆಗಲಿದೆ. ಭಾರತ್ ಜೋಡೋ ಪಾದಯಾತ್ರೆಯಿಂದ ಕಾಂಗ್ರೆಸ್ ಬಲವರ್ಧನೆಗೊಳ್ಳುತ್ತದೆ ಎಂಬ ಲೆಕ್ಕಾಚಾರ ಜಿಲ್ಲೆಯ ಮಟ್ಟಿಗೆ ಅಷ್ಟೊಂದು ಯಶಸ್ವಿಯಾದಂತೆ ಕಾಣುತ್ತಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

Leave a Reply