ಗ್ರಾಹಕರಿಗೆ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ

ಬೆಂಗಳೂರು: ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಆದೇಶ ಹೊರಡಿಸಿದೆ.

ಕೆಇಆರ್‌ಸಿ, 2022ರ ಸೆಪ್ಟೆಂಬರ್ 19 ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ. ಕೆಇಆರ್‌ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು ನಿಯಮಗಳು, 2013 ರ ಅನ್ವಯ ಇಂಧನ ಹೊಂದಾಣಿಕೆ ಶುಲ್ಕವನ್ನು 43 ಪೈಸೆ ಹೆಚ್ಚಳ ಮಾಡಿ ಬೆಸ್ಕಾಂಗೆ ಅನ್ವಯ ಆಗುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಕೇಂದ್ರ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (CGS), ಕರ್ನಾಟಕ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (KPCL) ಮತ್ತು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPCL) ನಿಂದ ಎಲ್ಲಾ ಎಸ್ಕಾಂಗಳು ವಿದ್ಯುತ್ ಖರೀದಿಸುತ್ತಿವೆ. ಏಪ್ರಿಲ್-2022 ರಿಂದ ಜೂನ್-2022 ರವರೆಗೆ 643 ಕೋಟಿ ರೂ.ಗಳಷ್ಟು ವಿದ್ಯುತ್ ಖರೀದಿ ವೆಚ್ಚ ಹೆಚ್ಚಳವಾಗಿದ್ದು, 80 ಪೈಸೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ವಸೂಲಿ ಮಾಡಲು ಬೆಸ್ಕಾಂ ಕೆಇಆರ್‌ಸಿಗೆ 2022ರ ಆಗಸ್ಟ್ 30 ರಂದು ಅರ್ಜಿ ಸಲ್ಲಿಸಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಆದರೆ ಗ್ರಾಹಕರಿಗೆ ಹೆಚ್ಚವರಿ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಶುಲ್ಕವನ್ನು ಆರು ತಿಂಗಳಿಗೆ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂ ಎಂ.ಡಿ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ PayCM ಅಸ್ತ್ರಕ್ಕೆ ಬಿಜೆಪಿಯಿಂದ KaiPe ಪ್ರತ್ಯಸ್ತ್ರ

ಕಳೆದ ಜುಲೈ ನಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಆರು ತಿಂಗಳ ಅವಧಿಗೆ 31 ಪೈಸೆಯಷ್ಟು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿತ್ತು. ಇದೀಗ ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆ ಆದ ಹಿನ್ನೆಲೆಯಲ್ಲಿ 43 ಪೈಸೆ ಹೆಚ್ಚಳ ಮಾಡಲಾಗಿದ್ದು, ಈ ಮೊತ್ತವನ್ನು ಅಕ್ಟೋಬರ್‌ನಿಂದ ಮುಂದಿನ ಮಾರ್ಚ್-2023ರವರೆಗೆ ಸಂಗ್ರಹಿಸಲಾಗುತ್ತದೆ ಎಂದು ಮಹಾಂತೇಶ ಬೀಳಗಿ ವಿವರಿಸಿದರು. ಇದನ್ನೂ ಓದಿ: ಮತ್ತೊಂದು ಕ್ರಷರ್ ದುರಂತ- ನೂರು ಅಡಿ ಆಳಕ್ಕೆ ಬಿದ್ದು ಕಾರ್ಮಿಕ ದುರ್ಮರಣ

ಇಂಧನ ವ್ಯತ್ಯಾಸ ದರಗಳನ್ನು KERC (ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು) ನಿಯಮಗಳು, 2013ರ ಪ್ರಕಾರ, ನಿರ್ದಿಷ್ಟಪಡಿಸಿದ ಉಷ್ಣ ವಿದ್ಯುತ್ ಸ್ಥಾವರಗಳಿಂದ ಖರೀದಿಸಿದ ವಿದ್ಯುಚ್ಛಕ್ತಿಯ ಮೇಲಿನ ಇಂಧನ ವೆಚ್ಚದಲ್ಲಿನ ಬೆಲೆ ವ್ಯತ್ಯಾಸದಿಂದಾಗಿ ಕಾಲಕಾಲಕ್ಕೆ ಜಾರಿಯಲ್ಲಿರುವ ಜಕಾತಿಗೆ ಅನುಸಾರವಾಗಿ, ಪ್ರತಿ ಮೂರು ತಿಂಗಳಿಗೊಮ್ಮೆ ಕೆಇಆರ್‍ಸಿ ಮುಂದೆ ಅರ್ಜಿ ಸಲ್ಲಿಸಲಾಗುತ್ತದೆ. ಅರ್ಜಿಯನ್ನು ಆಯೋಗವು ಪರಾಮರ್ಶಿಸಿ, ಇಂಧನ ವ್ಯತ್ಯಾಸ ದರವನ್ನು ವಸೂಲಿ ಅಥವಾ ಕಡಿತಗೊಳಿಸಲು ಕಾಲಕಾಲಕ್ಕೆ ಆದೇಶಿಸುತ್ತದೆ. ಕಲ್ಲಿದ್ದಲು ಹಾಗೂ ತೈಲ ಬೆಲೆ ಹೆಚ್ಚಾದಾಗ ಹೊಂದಾಣಿಕೆ ವೆಚ್ಚ ಹೆಚ್ಚಾಗುತ್ತದೆ, ಕಡಿಮೆಯಾದಾಗ ವೆಚ್ಚ ಇಳಿಯುತ್ತದೆ ಎಂದು ಬೆಸ್ಕಾಂ ಎಂ.ಡಿ ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *