ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಯಾಗುತ್ತಾ ಮದರಸಾ ಶಿಕ್ಷಣ ಮಂಡಳಿ?

ಬೆಂಗಳೂರು: ಮದರಸಾಗಳ ಶಿಕ್ಷಣದ ಮೇಲೆ ಕಣ್ಣಿಡಲು ಉತ್ತರ ಪ್ರದೇಶ ಮಾದರಿಯಲ್ಲಿ ವಿಶೇಷ ಮಂಡಳಿ ರಚನೆಗೆ ರಾಜ್ಯ ಸರ್ಕಾರದ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.

ಮದರಸಾಗಳ ಶಿಕ್ಷಣದ ಬಗ್ಗೆ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಅಡಿ ʼಕರ್ನಾಟಕ ಮದರಸಾ ವಿಶೇಷ ಶಿಕ್ಷಣ ಮಂಡಳಿʼ ರಚನೆಗೆ ಸರ್ಕಾರದ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೇತೃತ್ವದಲ್ಲಿ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಮದರಸಾಗಳ ಶಿಕ್ಷಣಕ್ಕೆ ಮಂಡಳಿ ಸ್ಥಾಪನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕಾರಣ ಏನು?
ಕರ್ನಾಟಕದಲ್ಲಿ 900 ಮದರಸಾಗಳು ವಕ್ಫ್‌ ಬೋರ್ಡ್‌ ಅಡಿ ನೋಂದಣಿಯಾಗಿದ್ದು ಪ್ರತಿ ವರ್ಷ 10 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಈ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಮದರಸಾಗಳಲ್ಲಿ ಶಿಕ್ಷಣದ ಬದಲಾಗಿ ಧರ್ಮ ಬೋಧನೆಯ ಕೆಲಸ ಆಗುತ್ತಿದೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆ ಆತಂಕ – ಹೊರಗಿನಿಂದ ಬರುವ ಮಸೀದಿ, ಮದರಸಾ ಧರ್ಮಗುರುಗಳಿಗೆ ಅಸ್ಸಾಂನಲ್ಲಿ ಹೊಸ ನಿಯಮ

ಅಷ್ಟೇ ಅಲ್ಲದೇ ರಾಷ್ಟ್ರಗೀತೆ, ರಾಷ್ಟ್ರ ಭಾವೈಕ್ಯತೆಯ ಕಾರ್ಯಕ್ರಮಗಳು‌ ನಡೆಯುತ್ತಿಲ್ಲ. ಮದರಸಾಗಳಲ್ಲಿ ಕಲಿಯೋ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕಂಪ್ಯೂಟರ್ ತರಬೇತಿ, ವಿಜ್ಞಾನದ ಲ್ಯಾಬ್ ಗಳು, ನೈತಿಕ ಶಿಕ್ಷಣದಂತಹ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಹಿನ್ನಲೆಯಲ್ಲಿ ಮಂಡಳಿ ರಚನೆಗೆ ಸರ್ಕಾರದ ಚಿಂತನೆ ನಡೆಸಿದೆ.

ಮಂಡಳಿಯ ಕಾರ್ಯ ವೈಖರಿ ಹೇಗೆ?
ಇದಕ್ಕಾಗಿ ಪ್ರತ್ಯೇಕ ಬೋರ್ಡ್ ರಚನೆ ಮಾಡದೇ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲೇ ಅಲ್ಪಸಂಖ್ಯಾತ ಶಿಕ್ಷಣ ವಿಭಾಗದಲ್ಲಿ ಮಂಡಳಿ ರಚನೆಯಾಗಲಿದೆ. ಈ ಮಂಡಳಿ ಮದರಸಾಗಳ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ.

ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿದೆಯಾ ಎಂದು ಪರಿಶೀಲನೆ ನಡೆಸುತ್ತದೆ. ಮಕ್ಕಳ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಕ್ರಮಗಳ ಶಿಫಾರಸು ಮಾಡಲಿದೆ. ಸರ್ಕಾರದ ಆದೇಶಗಳು ಪಾಲನೆ ಆಗುತ್ತಿವೆ ಎಂಬುದನ್ನು ಈ ಮಂಡಳಿ ಪರೀಕ್ಷೆ ಮಾಡಲಿವೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *