ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ

ನವದೆಹಲಿ: ಫಿಫಾ ಎಐಎಫ್‌ಎಫ್‌ ಮೇಲೆ ಹೇರಿರುವ ಅಮಾನತು ನಿರ್ಧಾರವನ್ನು ತೆಗೆದು ಭಾರತದಲ್ಲೇ 17 ವರ್ಷದ ಒಳಗಿನ ಮಹಿಳೆಯರ ವಿಶ್ವಕಪ್‌ ಆಯೋಜಿಸುವಂತೆ ಕ್ರಮ ವಹಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ವಿಶ್ವ ಫುಟ್‌ಬಾಲ್‌ ಆಡಳಿತ ಮಂಡಳಿ (ಫಿಫಾ) ಭಾರತೀಯ ಫುಟ್ಬಾಲ್ ಫೆಡರೇಶನ್ ಸಂಸ್ಥೆಯನ್ನು(ಎಐಎಫ್‌ಎಫ್‌) ಅಮಾನುತು ಮಾಡಿದ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.

ಫಿಫಾ ಅಮಾನತು ಮಾಡಿದ ನಿರ್ಧಾರವನ್ನು ಮಂಗಳವಾರ  ಕೋರ್ಟ್‌ ಗಮನಕ್ಕೆ ಸಾಲಿಸಿಟರ್‌ ಜನರಲ್‌ ತಂದಿದ್ದರು. ಇಂದು ನ್ಯಾ. ಡಿವೈ ಚಂದ್ರಚೂಡ್‌, ಎಎಸ್‌ ಬೋಪಣ್ಣ ಮತ್ತು ಜೆಬಿ ಪಾರ್ದಿವಾಲಾ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

ಈ ಸಂದರ್ಭದಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕೇಂದ್ರ ಸರ್ಕಾರ ಅಮಾನತು ನಿರ್ಧಾರ ತೆಗೆಯುವ ಸಂಬಂಧ ಫಿಫಾ ಜೊತೆ ಮಾತುಕತೆ ನಡೆಯುತ್ತಿದೆ. ಈಗಾಗಲೇ 2 ಬಾರಿ ಸಭೆ ನಡೆಸಿದೆ. ಮಾತುಕತೆ ಫಲಪ್ರದವಾಗುವ ಸಾಧ್ಯತೆಯಿದೆ. ಸಭೆಯ ಫಲಿತಾಂಶ ಬರುವವರೆಗೂ ಮುಂದಿನ ಸೋಮವಾರದವರೆಗೆ ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

ಅಷ್ಟೇ ಅಲ್ಲದೇ ಸುಪ್ರೀಂ ನೇಮಿಸಿದ ಮೂರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿ(CoA) ಸಮಸ್ಯೆ ಬಗೆಹರಿಸಲು ಫಿಫಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸಾಲಿಸಿಟರ್‌ ಜನರಲ್‌ ಕೋರ್ಟ್‌ ಗಮನಕ್ಕೆ ತಂದರು.

ಎಐಎಫ್‌ಎಫ್‌ನಲ್ಲಿ ಚುನಾವಣೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ರಾಹುಲ್‌ ಮೆಹ್ತಾ, ಮಾಜಿ ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರಿಂದಲೇ ಈ ಎಲ್ಲ ಘಟನೆಗಳು ಆಗುತ್ತಿದೆ ಎಂದು ವಾದಿಸಿದರು.

ಈ ಪ್ರಕರಣ ಬಗೆ ಹರಿಸುವ ಸಂಬಂಧ ಕೇಂದ್ರ ಸರ್ಕಾರದ ನಡೆಗೆ ಮೆಚ್ಚುಗೆ ಇದೆ ಎಂದ ಕೋರ್ಟ್‌ ಫಿಫಾ ಜೊತೆ ಮಾತುಕತೆ ನಡೆಸಿ ಅಮಾನತು ನಿರ್ಧಾರ ತೆಗೆಯಬೇಕು ಮತ್ತು ಭಾರತದಲ್ಲೇ ವಿಶ್ವಕಪ್‌ ಫುಟ್‌ಬಾಲ್‌ ಆಯೋಜನೆಯಾಗಬೇಕು ಎಂದು ಸೂಚಿಸಿತು.

ಸಾಲಿಸಿಟರ್‌ ಜನರಲ್‌ ಮನವಿಯ ಮೇರೆಗೆ ಕೋರ್ಟ್‌ ಮುಂದಿನ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *