ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಸಂಭವ – ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್

weather

ಬೆಂಗಳೂರು: ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಅಬ್ಬರ ಮುಂದುವರೆಯಲಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸಲಿದ್ದು, ಇತರೆ ಜಿಲ್ಲೆಗಳಲ್ಲಿ ಮಳೆ ಕಡಿಮೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ಬೀದರ್, ಕಲಬುರಗಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಡಿಕೇರಿಯಲ್ಲಿ ಕಾವೇರಿ ನದಿ ಆರ್ಭಟಿಸುತ್ತಿದೆ. ಚೆರಿಯಪರಂಬು ಕಲ್ಲುಮೊಟ್ಟೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಪರ್ಕ ಕಡಿತವಾಗಿದೆ. ಉಡುಪಿಯಲ್ಲಿ ನಿರಂತರ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಭಾರೀ ತೂಫಾನ್ ಹಿನ್ನೆಲೆ ಮೀನುಗಾರರು ಬೆಚ್ಚಿ ಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇದನ್ನೂ ಓದಿ: ನಾವು ಸಿದ್ದರಾಮೋತ್ಸವದಂತಹ ನೂರು ಕಾರ್ಯಕ್ರಮ ಮಾಡಿದ್ದೇವೆ: ಈಶ್ವರಪ್ಪ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಜನ ತತ್ತರಿಸಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ತೋಟ, ಭತ್ತದ ಗದ್ದೆಗಳಿಗೆ, ಮೀನುಗಾರರ ದೋಣಿಗಳಿಗೂ ನೀರು ನುಗ್ಗಿ ಸಾಕಷ್ಟು ಹಾನಿ ಮಾಡಿದೆ. ಅಂದಾಜು 40 ಕೋಟಿಗೂ ಅಧಿಕ ಹಾನಿಯಾಗಿದ್ದು ಜನ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ, ಆಲೂರು ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೇಮಾವತಿ ನದಿಗೆ ಒಳಹರಿವು ಹೆಚ್ಚಾಗಿದೆ. 39,500 ಕ್ಯೂಸೆಕ್ ನೀರನ್ನು ಆರು ಕ್ರಸ್ಟ್ ಗೇಟ್‍ಗಳ ಮೂಲಕ ಹೊರ ಬಿಡಲಾಗುತ್ತಿದೆ. ಇದನ್ನೂ ಓದಿ: CWG 2022: ಚಿನ್ನಕ್ಕೆ ಮುತ್ತಿಟ್ಟ ರವಿ ಕುಮಾರ್ ದಹಿಯಾ, ವಿನೇಶ್ ಫೋಗಟ್ – ಪೂಜಾ ಗೆಹ್ಲೋಟ್‍ಗೆ ಕಂಚು

ಹಾಸನ ಜಿಲ್ಲೆಯಲ್ಲಿ ಒಂದು ವಾರದಿಂದ ಪ್ರತಿನಿತ್ಯ ಸರಾಸರಿ 25 ರಿಂದ 30 ಮಿಮಿ ಮಳೆಯಾಗುತ್ತಿದ್ದು, ಮಳೆಗೆ ಈವರೆಗೆ ಜಿಲ್ಲೆಯಲ್ಲಿ 350 ಮನೆಗಳು ಕುಸಿತಗೊಂಡಿದೆ. 450 ಕೋಟಿಗೂ ಹೆಚ್ಚು ನಷ್ಟವಾಗಿದೆ. ಕೃಷ್ಣ ನದಿ ಆರ್ಭಟಕ್ಕೆ ರಾಯಚೂರು ಜಿಲ್ಲೆಯಲ್ಲಿ ಹಲವು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ನದಿ ತಟದಲ್ಲಿರುವ ಬೂರ್ದಿಪಾಡ ಗ್ರಾಮ ಪ್ರತೀ ಬಾರಿ ಪ್ರವಾಹದ ಭೀತಿ ಎದುರಿಸುತ್ತಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಮಳೆಯಿಂದ ರಸ್ತೆಗಳೇ ಗದ್ದೆಯಂತಾಗಿದೆ. ಇಲ್ಲಿನ ವಿಠ್ಠಲ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ರಸ್ತೆ ಸಂಪೂರ್ಣ ಹಾಳಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *