ಜನಶಕ್ತಿಯ ಮುಂದೆ ದ್ವೇಷ ಶಕ್ತಿ ನಡೆಯಲ್ಲ: ಬಿಜೆಪಿಗೆ ಸಿದ್ದು ಟಾಂಗ್‌

ದಾವಣಗೆರೆ: ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜನಶಕ್ತಿಯ ಮುಂದೆ ದ್ವೇಷ ಶಕ್ತಿ ನಡೆಯಲ್ಲ ಎಂದು ಸಿದ್ದರಾಮಯ್ಯ ಟಾಂಗ್‌ ಕೊಟ್ಟರು.

ತಮ್ಮ 75ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ಕೊಟ್ಟರು. ಸೋನಿಯಾ ಗಾಂಧಿ ಅವರ ವಯಸ್ಸು ನೋಡದೇ ಗಂಟೆಗಟ್ಟಲೆ ವಿಚಾರಣೆ ಮಾಡಿದರು. ಅಮಾಯಕರ ವಿಚಾರಣೆಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಸೇಡಿನ ರಾಜಕಾರಣ ಮಾಡುವ ಕೋಮುವಾದಿ ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ಬಗ್ಗಿ ಬಗ್ಗಿ ನಮಸ್ಕಾರ ಮಾಡೋರನ್ನು ದೂರ ಇಡಿ- ಸಿದ್ದುಗೆ ರಮೇಶ್ ಕುಮಾರ್ ಕಿವಿಮಾತು

ಒಂದು ನಾಯಕ, ಒಂದು ಚಿನ್ಹೆ, ಸರ್ವಾಧಿಕಾರ ಭಾವನೆಯೊಂದಿಗೆ ಸಂವಿಧಾನ ಬದಲಾಯಿಸಲು ಆರ್‌ಎಸ್‌ಎಸ್‌, ಬಿಜೆಪಿ ಹೊರಟಿದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಹಲವು ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರ ಇಲ್ಲ ಎಂದು ತಿರುಗೇಟು ನೀಡಿದರು.

ಈಗಿನ ಬಿಜೆಪಿ ಸರ್ಕಾರದಲ್ಲಿ ಕೋಮುವಾದಿತನ, ಭ್ರಷ್ಟಾಚಾರ ಮಿತಿಮೀರಿದೆ. ಇಷ್ಟೊಂದು ಕೋಮುವಾದಿತನ, ಭ್ರಷ್ಟಾಚಾರ ನಾನು ನೋಡಿಲ್ಲ. ಕೋಮುವಾದಿ ಬಿಜೆಪಿ ಕಿತ್ತೊಗೆದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಿ ಎಂದು ಜನತೆಗೆ ಕರೆ ಕೊಟ್ಟರು.

ದೇಶದಲ್ಲಿ ಆತಂಕದ ವಾತಾವರಣ ಇದೆ. ಮೋದಿ ಪ್ರಧಾನಿ ಆದ ಮೇಲೆ ಜನರಿಗೆ ಸಂಕಷ್ಟ ಎದುರಾಗಿದೆ. ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ, ಸಾಂವಿಧಾನಿಕ ರಕ್ಷಣೆ ಇಲ್ಲ. ಅವರು ಹಿಂದೂ ರಾಷ್ಟ್ರದ ನಿರ್ಮಾಣ ಎನ್ನುತ್ತಾ ಲೂಟಿ ಮಾಡಲು ಅಧಿಕಾರಕ್ಕೆ ಬಂದಿದ್ದಾರೆ. ಸಂವಿಧಾನ ಬದಲಾವಣೆ, ಸರ್ವಾಧಿಕಾರ ತರೋದು ಬಿಜೆಪಿಯ ಉದ್ದೇಶ. ಬಿಜೆಪಿ ನಾಯಕರೇ, ಮೋದಿಯವರೇ ನೀವೆಲ್ಲಿದ್ದರೂ ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ. ಸಂವಿಧಾನ ಬದಲಾಯಿಸಲು ಈ ದೇಶದ ಜನ ಬಿಡಲ್ಲ. ನಿಮ್ಮ ಕನಸು ನನಸಾಗಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಕ್ಕಿಕಾಳಿನ ಆಕೃತಿ ನಿರ್ಮಿಸಿ, ಅನ್ನಭಾಗ್ಯ ಸ್ಮರಿಸಿದ ಸಿದ್ದು ಅಭಿಮಾನಿ

ದೇಶದ ಅಧಿಕಾರವನ್ನು ಜನಕಾಳಜಿ ಇರೋರೇ ಹಿಡಿಯಬೇಕು. ಅದಕ್ಕೆ ರಾಹುಲ್ ಗಾಂಧಿ‌ ಯೋಗ್ಯರು. ಮೋದಿಯವರು ವಚನ ಭ್ರಷ್ಟರಾಗಿದ್ದಾರೆ. ಮೋದಿ ಪ್ರಧಾನಿ ಆಗೋ ಮುಂಚೆ ದೇಶದ ಸಾಲ ಎಷ್ಟಿತ್ತು, ಈಗ ಎಷ್ಟಿದೆ? ಮೋದಿ ಪ್ರಧಾನಿ ಆದ ಮೇಲೆ ಎಂಟು ವರ್ಷದ ಬಳಿಕ 155 ಲಕ್ಷ ಕೋಟಿ ರೂ. ಸಾಲ ಆಗಿದೆ. 102 ಲಕ್ಷ ಕೋಟಿ ಸಾಲವನ್ನು ಎಂಟು ವರ್ಷದಲ್ಲಿ ಮಾಡಿದ್ದಾರೆ ಎಂದು ಟೀಕಿಸಿದರಲ್ಲದೇ, 2024ಕ್ಕೆ ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗ್ತಾರೆ. ರಾಹುಲ್ ಗಾಂಧಿ ಈ ದೇಶದ ಆಶಾಕಿರಣ ಎಂದು ತಿಳಿಸಿದರು.

ಕರಾವಳಿಯಲ್ಲಿ ಇತ್ತೀಚೆಗೆ ಮೂರು ಕೊಲೆಗಳಾಗಿವೆ. ಮಸೂದ್, ಪ್ರವೀಣ್, ಫಾಝಿಲ್ ಕೊಲೆ ಆಯ್ತು. ಬೊಮ್ಮಾಯಿ ಇಡೀ ಕರ್ನಾಟಕದ ಮುಖ್ಯಮಂತ್ರಿ ನಾ? ಅಥವಾ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿ ನಾ? ಬೊಮ್ಮಾಯಿ ಪ್ರವೀಣ್‌ಗೆ ಪರಿಹಾರ ಕೊಟ್ಟಂತೆ ಯಾಕೆ ಮಸೂದ್, ಫಾಝಿಲ್‌ಗೆ ಕೊಡ್ಲಿಲ್ಲ? ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೇಳಲು ನೈತಿಕತೆ ಇಲ್ಲ. ಬೊಮ್ಮಾಯಿಗೆ ರಾಜ್ಯ ಆಳಲು ನೈತಿಕತೆ ಇಲ್ಲ. ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ. ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಳ್ಳಿತೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್

ಕರ್ನಾಟಕದಲ್ಲಿ ಇನ್ನೂ ಕೃಷಿ, ಎಪಿಎಂಸಿ ಕಾಯ್ದೆ ವಾಪಸ್ ತಗೊಂಡಿಲ್ಲ ಸರ್ಕಾರ. ನಮ್ಮ ಸರ್ಕಾರ ಇದ್ದಾಗ ನಾವು ನುಡಿದಂತೆ ನಡೆದಿದ್ದೇವೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಇತಿಹಾಸದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ನುಡಿದಂತೆ ನಡೆದಿರೋದು. ನೀವು ಏನ್ಮಾಡಿದೀರಿ ಬೊಮ್ಮಾಯಿ? ರಾಜ್ಯದ ಜನ ನಿರ್ಧಾರ ಮಾಡಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿರ್ಧಾರ ಮಾಡಿದ್ದಾರೆ ಜನ ಎಂದು ಹೇಳಿದರು.

2022 ರ ಆಗಸ್ಟ್‌ 15ಕ್ಕೆ ನಮಗೆ ಸ್ವಾತಂತ್ರ್ಯ ದೊರಕಿ 75 ವರ್ಷ ತುಂಬ್ತಿದೆ. ಈ ವರ್ಷ ಇಡೀ ದೇಶದಲ್ಲಿ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ರಾಜ್ಯ, ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಕೋರುತ್ತೇನೆ. ಕಾಕತಾಳೀಯ ಎಂಬಂತೆ ಇವತ್ತಿಗೆ ನನಗೆ 75 ವರ್ಷ ತುಂಬಿದೆ. ನಾನು ಎಂದೂ ಜನ್ಮದಿನ ಆಚರಿಸಿಕೊಂಡಿಲ್ಲ. ಪಕ್ಷದ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು 75 ತುಂಬ್ತಿದೆ, ಸಕ್ರಿಯ ರಾಜಕಾರಣದಲ್ಲಿ ಇದ್ದೀರಿ ಅಂತಾ ಜನ್ಮದಿನ‌ ಮಾಡಿಕೊಳ್ಳಲು ಒತ್ತಾಯ ಮಾಡಿದ್ರು. ಅವರ ಒತ್ತಾಯಕ್ಕೆ ಮಣಿದು 75ನೇ ಹುಟ್ಟುಹಬ್ಬ ಆಚರಣೆಗೆ ಒಪ್ಪಿದೆ. ಎಲ್ಲರ ಆಶೀರ್ವಾದ, ಶುಭಾಶಯ ಬಯಸುತ್ತಿದ್ದೇನೆ. ಸಿದ್ದರಾಮಯ್ಯ ಅವರ ಮೇಲೆ ವಿಶೇಷ ಪ್ರೀತಿಯಿಂದ ಬಂದಿದ್ದೀನಿ ಅಂತಾ ರಾಹುಲ್ ಗಾಂಧಿ ಹೇಳಿದ್ರು. ಅವರಿಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ. ನಾನು ಕಾಂಗ್ರೆಸ್ ಸೇರಿದಾಗಿನಿಂದ ಇವತ್ತಿನವರೆಗೂ ನನ್ನ ಮೇಲೆ ಅವರು ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನು ಬೇರೆ ಪಕ್ಷದಿಂದ ಬಂದಿದ್ದರೂ ನನ್ನ ಮೇಲೆ ಪ್ರೀತಿ ಇದೆ. ನಾನು ಸಿಎಂ‌ ಆಗಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

ಜನಶಕ್ತಿಯ ಆಶೀರ್ವಾದ ಇಲ್ಲದಿದ್ರೆ ದೀರ್ಘಕಾಲ ರಾಜಕೀಯ, ಜನಸೇವೆ ಮಾಡಕ್ಕಾಗಲ್ಲ. ಜನರ ಆಶೀರ್ವಾದ, ಪ್ರೀತಿಯಿಂದ ಶಾಸಕ, ಮಂತ್ರಿ, ಮುಖ್ಯಮಂತ್ರಿ ಆಗಿ ಸೇವೆ ಮಾಡಲು ಅವಕಾಶ ಸಿಕ್ತು. ಎಲ್ಲಿವರೆಗೆ ದೈಹಿಕ, ಮಾನಸಿಕವಾಗಿ ಸದೃಢ ಆಗಿರುತ್ತೇನೋ ಅಲ್ಲಿಯವರೆಗೂ ಸಕ್ರಿಯ ರಾಜಕೀಯ ಮಾಡ್ತಾ ಜನರ ಸೇವೆ ಮಾಡ್ತೇನೆ. ಡಿಕೆಶಿ ಮತ್ತು ನನ್ನ ಬಗ್ಗೆ ವಿಪಕ್ಷಗಳು ಸುಳ್ಳು ಹೇಳಿಕೆ ನೀಡಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ. ನಮ್ಮ ಮಧ್ಯೆ ಬಿರುಕಿದೆ ಎನ್ನುವುದು ವಿಪಕ್ಷಗಳ ಭ್ರಮೆ. ನಾನು ಮತ್ತು ಡಿಕೆಶಿ ಒಟ್ಟಾಗಿ ಇದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಜನರ ಆಶೀರ್ವಾದ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *