18 ತಿಂಗಳಲ್ಲಿ 200 ಕೋಟಿ ಡೋಸ್‌ ಕೊರೊನಾ ಲಸಿಕೆ- ದಾಖಲೆ ಸೃಷ್ಟಿಸಿದ ಭಾರತ

ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ವಿಶ್ವದಲ್ಲೇ ಅತಿದೊಡ್ಡ ಲಸಿಕಾಕರಣವನ್ನು ಪ್ರಾರಂಭಿಸಿದ ಭಾರತವು 18 ತಿಂಗಳಲ್ಲಿ 200 ಕೋಟಿ ಡೋಸ್‌ ಲಸಿಕೆಯನ್ನು ನೀಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ.

ಭಾರತದಲ್ಲಿ 2021ರ ಜನವರಿ 16ರಂದು ಲಸಿಕೆಯನ್ನು ನೀಡಲು ಪ್ರಾರಂಭಿಸಲಾಯಿತು. ಈವರೆಗೆ ದೇಶದಲ್ಲಿ 200 ಕೋಟಿ ಡೋಸ್‌ ಲಸಿಕೆಯನ್ನು ನೀಡುವ ಮೂಲಕ ಮೈಲುಗಲ್ಲನ್ನು ಸಾಧಿಸಿದೆ. ಶನಿವಾರ ರಾತ್ರಿಯವರೆಗೆ ದೇಶಾದ್ಯಂತ 199.97 ಕೋಟಿ ಡೋಸ್‍ ಕೋವಿಡ್ ಲಸಿಕೆಗಳನ್ನು ನೀಡಲಾಗಿದ್ದು, ಇದರಲ್ಲಿ 5.48 ಕೋಟಿ ಬೂಸ್ಟರ್ ಡೋಸ್‍ಗಳು ಸೇರಿವೆ.

100 ಕೋಟಿ ಡೋಸ್‍ಗಳನ್ನು ತಲುಪಲು 277 ದಿನಗಳನ್ನು ತೆಗೆದುಕೊಂಡಿತ್ತು. ಕಳೆದ ವರ್ಷ ಸೆ. 17ರಂದು, ಒಂದೇ ದಿನದಲ್ಲಿ 2.5 ಕೋಟಿ ಡೋಸ್‍ ಲಸಿಕೆಗಳನ್ನು ನೀಡಲಾಯಿತು. ಇದು ಈವರೆಗಿನ ಗರಿಷ್ಠ ಲಸಿಕಾಕರಣವಾಗಿದೆ.

ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಭಾರತ ಮತ್ತೆ ಇತಿಹಾಸವನ್ನು ಸೃಷ್ಟಿಸಿದೆ. ಈವರೆಗೆ ದೇಶದಲ್ಲಿ 200 ಕೋಟಿ ಡೋಸ್‍ ಲಸಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆದ ಭಾರತೀಯರಿಗೆಲ್ಲರಿಗೂ ಅಭಿನಂದನೆಗಳು. ಭಾರತದ ಲಸಿಕಾಕರಣದ ಪ್ರಮಾಣ ಹಾಗೂ ವೇಗ ಹೆಚ್ಚಿಸಲು ಕೊಡುಗೆ ನೀಡಿದವರ ಬಗ್ಗೆ ಹೆಮ್ಮೆ ಇದೆ. ಇದು ಕೊರೊನಾ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಶೇ. 98ರಷ್ಟು ವಯಸ್ಕರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಹಾಗೂ ಶೇಕಡಾ 90ರಷ್ಟು ವಯಸ್ಕರು ಎರಡು ಡೋಸ್‍ ಲಸಿಕೆಯನ್ನು ಪಡೆದಿದ್ದಾರೆ. ವಿಶ್ವದಲ್ಲಿ 62.1 ಪ್ರತಿಶತದಷ್ಟು ಜನರು ವೈರಸ್ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.

ಈವರೆಗೆ ಶೇ. 71ರಷ್ಟು ಜನರು ಗ್ರಾಮೀಣದಲ್ಲಿರುವ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಮತ್ತು ಶೇಕಡಾ 29ರಷ್ಟು ಜನರು ನಗರ ಪ್ರದೇಶಗಳಲ್ಲಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಡೋಸ್‍ಗಳಲ್ಲಿ 48.9 ಪ್ರತಿಶತವನ್ನು ಮಹಿಳೆಯರಿಗೆ ನೀಡಿದರೆ, 51.5 ಪ್ರತಿಶತವನ್ನು ಪುರುಷರಿಗೆ ನೀಡಲಾಗಿದೆ.

ಈ ವಾರ, ಕೇಂದ್ರ ಆರೋಗ್ಯ ಸಚಿವಾಲಯವು 18ರಿಂದ 59ನೇ ವಯಸ್ಸಿನ ಜನರಿಗೆ ಬೂಸ್ಟರ್ ಡೋಸ್‍ಗಳನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದೆ. ಈವರೆಗೆ ಒಟ್ಟು 5,63,67,888 ಜನರಿಗೆ ಬೂಸ್ಟರ್ ಡೋಸ್‍ಗಳನ್ನು ನೀಡಲಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *