ಆದಾಯ ಮೀರಿ ಆಸ್ತಿ ಗಳಿಕೆ – ಶಾಸಕ ಜಮೀರ್‌ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಾಮರಾಜಪೇಟೆಯ  ಶಾಸಕ ಜಮೀರ್‌ ಅಹ್ಮದ್‌ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದೆ.

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ಭವ್ಯ ಬಂಗಲೆ ಮೇಲೆ ಸೇರಿದಂತೆ ಜಮೀರ್‌ಗೆ ಸಂಬಂಧಿಸಿದ 5 ಕಡೆ ದಾಳಿ ನಡೆದಿದೆ.

ಈ ಹಿಂದೆ ಇಡಿ ಜಮೀರ್‌ ನಿವಾಸದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಹಲವು ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧಾರದ ಮೇಲೆ ಎಸಿಬಿ ದಾಳಿ ನಡೆಸಿದೆ. ಕಂಟೋನ್ಮೆಂಟ್ ರೈಲ್ವೇ ವಲಯದಲ್ಲಿರುವ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್‌ನಲ್ಲಿರುವ ಫ್ಲ್ಯಾಟ್‌, ಸದಾಶಿವನಗರದಲ್ಲಿರುವ ಅತಿಥಿ ಗೃಹ, ಬನಶಂಕರಿಯಲ್ಲಿರುವ ಜಿ ಕೆ ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ನಡೆದಿದ್ದು ಎಸಿಬಿ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಇಡಿ ಅಧಿಕಾರಿಗಳ ದಾಳಿ ವೇಳೆ ಸರ್ಕಾರಿ ಯೋಜನೆಯೊಂದರಲ್ಲಿ ಬಾರಿ ಅವ್ಯವಹಾರ ಆಗಿರುವ ಸಂಬಂಧ ದಾಖಲೆ ಲಭ್ಯವಾಗಿತ್ತು. 6 ತಿಂಗಳ ಹಿಂದೆ ಇಡಿ ಈ ಬಗ್ಗೆ ವರದಿ ನೀಡಿತ್ತು. 2 ತಿಂಗಳ ಎರಡನೇ ಬಾರಿಗೆ ವರದಿ ನೀಡಿತ್ತು. ಈ ದಾಖಲೆ ಅಧಾರದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಎಸಿಬಿ ಪ್ರಕರಣ ದಾಖಲಿಸಿತ್ತು.

ಜಮೀರ್‌ ಮೇಲಿರುವ ಆರೋಪ ಏನು?
ಮುಂಬೈನಲ್ಲಿ ಈಗಾಗಲೇ ಟ್ರಾವೆಲ್ಸ್ ಕಂಪನಿಯ ಮಾಲೀಕತ್ವ ಹೊಂದಿರುವ ಜಮೀರ್‌ ವಿದೇಶದಲ್ಲೂ ಆಸ್ತಿ ಮಾಡಿದ್ದಾರೆ ಎಂಬ ಆರೋಪ ಇದೆ. ದುಬೈನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪವಿದ್ದು, ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಜೊತೆ ಸಂಬಂಧ ಹೊಂದಿದ್ದು ಮನ್ಸೂರ್ ಖಾನ್ ಕಂಪನಿಯ ಮೂಲಕ ಹಣಕಾಸಿನ ವ್ಯವಹಾರ ನಡೆಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಶ್ರೀಲಂಕಾದಲ್ಲಿ ಶಿಷ್ಯರ ಹೆಸರಿನಲ್ಲಿ ಕ್ಯಾಸಿನೋ ನಡೆಸುತ್ತಿದ್ದಾರೆ ಎನ್ನುವ ಆರೋಪವೂ ಇದೆ.

Comments

Leave a Reply

Your email address will not be published. Required fields are marked *