ಬಾಲಿವುಡ್ ಅಂಗಳದಲ್ಲಿ ಬಿಗ್ ಫೈಟ್ ಗೆ ವೇದಿಕೆ ಸಜ್ಜಾಗುತ್ತಿದೆ. ಬಿಟೌನ್ ನ ಇಬ್ಬರು ಸೂಪರ್ ಸ್ಟಾರ್ ಗಳ ಚಿತ್ರಗಳು ಆಗಸ್ಟ್ 11ಕ್ಕೆ ಬಿಡುಗಡೆ ಆಗುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ. ಕೇವಲ ಸಿನಿಮಾದಿಂದ ಮಾತ್ರವಲ್ಲ, ಇತರ ವಿಷಯಗಳಿಂದಾಗಿಯೂ ಸಿನಿಮಾದ ಸೋಲು ಗೆಲುವಿನ ಚರ್ಚೆಗಳು ನಡೆದಿವೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಇದ್ದರೂ, ಈಗಿನಿಂದಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ನಡೆದಿದೆ.

ಬಾಲಿವುಡ್ ಇಬ್ಬರು ಖ್ಯಾತ ನಟರಾದ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಟನೆಯ ಚಿತ್ರಗಳು ಆಗಸ್ಟ್ 11 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿವೆ. ಅಕ್ಷಯ್ ನಟನೆಯ ರಕ್ಷಾ ಬಂಧನ್ ಮತ್ತು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಏಕಕಾಲಕ್ಕೆ ತೆರೆ ಕಾಣುತ್ತಿವೆ. ಎರಡೂ ನಿರೀಕ್ಷಿತ ಚಿತ್ರಗಳು ಆಗಿದ್ದರಿಂದ, ಪ್ರೇಕ್ಷಕನ ಒಲವು ಯಾರ ಕಡೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಎರಡೂ ಸಿನಿಮಾಗಳು ತಮ್ಮದೇ ಆದ ಕಾರಣಗಳಿಂದಾಗಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿವೆ. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

ಈಗಾಗಲೇ ಲಾಲ್ ಸಿಂಗ್ ಚಡ್ಡಾ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಆಮೀರ್ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಅದ್ಧೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಟ್ರೇಲರ್ ಕೂಡ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಅದು ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಎರಡೂ ಚಿತ್ರಗಳು ಕೂಡ ಭರವಸೆ ಮೂಡಿಸಿರುವುದರಿಂದ ದೊಡ್ಡ ಮಟ್ಟದಲ್ಲಿ ಫೈಟ್ ಎದುರಾಗಲಿದೆ.

ಈ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಎರಡು ದೊಡ್ಡ ಸಿನಿಮಾಗಳು ಬಂದಾಗ ಈ ರೀತಿ ಗೊಂದಲ ಆಗುವುದು ಸಹಜ. ಹಾಗಂತ ನಾನು ಇದನ್ನು ಕ್ಲ್ಯಾಶ್ ಎಂದು ಕರೆಯುವುದಿಲ್ಲ. ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿವೆ ಎಂದಷ್ಟೇ ಹೇಳುವ. ಎರಡೂ ಚಿತ್ರಗಳು ಚೆನ್ನಾಗಿ ಕಲೆಕ್ಷನ್ ಮಾಡಲಿವೆ ಎಂಬ ನಂಬಿಕೆ ನನ್ನದು’ ಅಂತಾರೆ ಅಕ್ಷಯ್ ಕುಮಾರ್.

Leave a Reply