ನನ್ನ ಮಗನನ್ನು ಉಳಿಸು ದೇವರೇ – ಶಿಲುಬೆ ಮುಂದೆ ಕಂದನನ್ನು ಮಲಗಿಸಿದ ದಂಪತಿ

ಬೆಳಗಾವಿ: ನನ್ನ ಮಗುವನ್ನು ಉಳಿಸು ಎಂದು ದಂಪತಿ ತನ್ನ ಏಳೂವರೆ ವರ್ಷದ ಮಗುವನ್ನು ಶಿಲುಬೆ ಮುಂದೆ ಮಲಗಿಸಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ನಂದಗಡ ಗ್ರಾಮದ ಪಶ್ಚಿಮ ಘಟ್ಟದ ಬೆಟ್ಟದ ಮೇಲಿರುವ ಐತಿಹಾಸಿಕ ಶಿಲುಬೆ(Holy Cross) ಮುಂದೆ ದಂಪತಿ ತಮ್ಮ ಏಳೂವರೆ ವರ್ಷದ ಮಗನನ್ನು ಮಲಗಿಸಿ ‘ಮಿದುಳು ಜ್ವರದಿಂದ ಬಳಲುತ್ತಿರುವ ನಮ್ಮ ಪುತ್ರನನ್ನು ಕಾಪಾಡು ದೇವರೇ ಎಂದು ಕಣ್ಣೀರಿಟ್ಟಿದ್ದಾರೆ.

ಏನಿದು ಘಟನೆ?
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಕೃಷ್ಣಾ ಮತ್ತು ಸುತ್ರಾವಿ ಪುತ್ರ ಶೈಲೇಶ್‍ಗೆ ಏಳೂವರೆ ವರ್ಷ. ಕೃಷ್ಣಾ ಮತ್ತು ಸುತ್ರಾವಿ ಕೂಲಿ ವೃತ್ತಿಯನ್ನು ಮಾಡುತ್ತಿದ್ದಾರೆ. ಶೈಲೇಶ್ ಕಳೆದ ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ. ಈ ಹಿನ್ನೆಲೆ ಆತನನ್ನು ದಂಪತಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷಿಸಿದ ಮೇಲೆ ಶೈಲೇಶ್‍ಗೆ ಮೆದುಳು ಜ್ವರ ಇರುವುದು ಪತ್ತೆಯಾಗಿದೆ.

ಈ ದಂಪತಿ ತಮ್ಮ ಮಗನನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಆದರೆ ಶೈಲೇಶ್ ಎರಡು ತಿಂಗಳು ಕಳೆದರೂ ಗುಣಮುಖನಾಗದ ಹಿನ್ನೆಲೆ ವೈದ್ಯರು, ಮನೆಗೆ ಕರೆದುಕೊಂಡು ಹೋಗಿ. ಇವನು ಅರ್ಧ ಗಂಟೆ ಮಾತ್ರ ಬದುಕುತ್ತಾನೆ ಎಂದು ಹೇಳಿದ್ದಾರೆ.

ಕುಟುಂಬಸ್ಥರು ಆರು ದಿನ ಮನೆಯಲ್ಲಿ ಶೈಲೇಶ್‍ನನ್ನು ಇಟ್ಟುಕೊಂಡು ನಂದಗಡಕ್ಕೆ ಬಂದಿದ್ದಾರೆ. ಶಿಲುಬೆ ಎದುರು ಮಗುವನ್ನು ಮಲಗಿಸಿ ನನ್ನ ಮಗನನ್ನು ಬದುಕಿಸಿಕೊಡುವಂತೆ ದೇವರ ಮೊರೆ ಹೋಗಿದ್ದಾರೆ. ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕುಟುಂಬಸ್ಥರು ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಶಿಲುಬೆಯ ಇತಿಹಾಸವೇನು?
ನಂದಗಡ ಬೆಟ್ಟದಲ್ಲಿರುವ ಶಿಲುಬೆ ಐತಿಹಾಸಿಕ ಮಹತ್ವ ಪಡೆದಿದೆ. 1920ರಲ್ಲಿ ಪ್ಲೇಗ್ ಬಂದಾಗ ಪಾದ್ರಿಯೊಬ್ಬರು ಜನರನ್ನು ಇದೇ ಶಿಲುಬೆ ಇರುವ ಬೆಟ್ಟದ ಮೇಲೆ ಕರೆತಂದು ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. ಆ ಪ್ರಾರ್ಥನೆ ಫಲಿಸಿತು ಎಂಬ ಮಾತು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದು ಬಂದಿದೆ. ಹೀಗಾಗಿ, ಪ್ರತಿ ವರ್ಷ ಹಲವರು ತಮ್ಮ ಹರಕೆಗೆ ಇಲ್ಲಿಗೆ ಬರುವುದು ರೂಡಿ.

Live Tv

Comments

Leave a Reply

Your email address will not be published. Required fields are marked *