ಇಡಿ ಇಕ್ಕಳದಲ್ಲಿ ಕಾಂಗ್ರೆಸ್ ನಾಯಕ- 3ನೇ ದಿನವೂ ವಿಚಾರಣೆ ಎದುರಿಸಲಿರುವ ರಾಹುಲ್ ಗಾಂಧಿ

ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಅವರನ್ನ ಸದ್ಯಕ್ಕೆ ಇಡಿ ಅಧಿಕಾರಿಗಳು ಕೈ ಬಿಡುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ಎರಡು ದಿನಗಳ ಕಾಲ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೂರನೇ ದಿನವಾದ ಬುಧವಾರವೂ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.

ಇಡಿ ಸಮನ್ಸ್ ಹಿನ್ನೆಲೆ ಇಂದು ಬೆಳಗ್ಗೆ 11 ಗಂಟೆಗೆ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ಸೋಮವಾರ ಹತ್ತು ಮತ್ತು ನಿನ್ನೆ 9 ಗಂಟೆಗಳ ಇಡಿ ಅಧಿಕಾರಿಗಳು ನಾಲ್ಕು ಹಂತದಲ್ಲಿ ವಿಚಾರಣೆ ನಡೆಸಿದ್ದಾರೆ. ಮೊದಲ ದಿನ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದ ಇಡಿ ಅಧಿಕಾರಿಗಳು ಯಂಗ್ ಇಂಡಿಯಾ ಮಾಡಿರುವ ಸಾಲಗಳ ಬಗ್ಗೆ ಕೆಲವು ದಾಖಲೆ ಸಲ್ಲಿಸಲು ಸೂಚನೆ ನೀಡಿದ್ದರು. ಇದನ್ನೂ ಓದಿ: ಅಂದು ಜಯಾ ಜೈಲಿಗೆ, ಇಂದು ಸಂಕಷ್ಟದಲ್ಲಿ ಸೋನಿಯಾ, ರಾಹುಲ್‌ – ಇದು ಸ್ವಾಮಿ ದೂರಿನ ಕರಾಮತ್ತು

ಅಂತೆಯೇ ನಿನ್ನೆ ದಾಖಲೆಗಳನ್ನು ಸಲ್ಲಿಸಿ ರಾಹುಲ್ ಗಾಂಧಿ ವಿಚಾರಣೆ ಎದುರಿಸಿದ್ದಾರೆ. ಎರಡು ದಿನಗಳ ವಿಚಾರಣೆಯಲ್ಲಿ ಹತ್ತಾರು ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದು ಎಲ್ಲ ಮಾಹಿತಿಯನ್ನು ಇಡಿ ಅಧಿಕಾರಿಗಳು ಲಿಖಿತ ರೂಪದಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಈವರೆಗೂ ಐವತ್ತು ಪುಟಗಳ ಹೇಳಿಕೆ ನೀಡಿದ್ದು, ಎಲ್ಲ ಪುಟಗಳ ಮೇಲೆ ಇಡಿ ಅಧಿಕಾರಿಗಳು ಸಹಿ ಮಾಡಿಸಿಕೊಂಡಿದ್ದಾರೆ. ಡೋಟೆಕ್ಸ್ ಮರ್ಚಂಡೈಸ್ ಕಂಪನಿ ಮೂಲಕ ಯಂಗ್ ಇಂಡಿಯಾ ಸಾಲ ಪಡೆದಿದ್ದು ಮತ್ತು ಅದನ್ನು ಮರು ಪಾವತಿ ಮಾಡದಿರುವುದು ಇಡಿ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು.

ಇದಕ್ಕೆ ಉತ್ತರ ನೀಡಿರುವ ರಾಹುಲ್ ಗಾಂಧಿ, ಡೋಟೆಕ್ಸ್ ಮರ್ಚಂಡೈಸ್ ಗೆ ಸಾಲ ಮರುಪಾವತಿ ಮಾಡಿರುವ ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ ಇಡಿ ಯಂಗ್ ಇಂಡಿಯಾಗೆ ಇರುವ ಹಣಕಾಸು ಮೂಲ ಮತ್ತು ವಿದೇಶಿ ಹೂಡಿಕೆಗಳ ಬಗ್ಗೆ ಇಡಿ ಪರಿಶೀಲನೆ ಮಾಡುತ್ತಿದೆ.

Comments

Leave a Reply

Your email address will not be published. Required fields are marked *