ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್

ಮುಂಬೈ: 2023 ರಿಂದ 2027ವರೆಗಿನ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದ ಆನ್‍ಲೈನ್ ಶಾಪಿಂಗ್‍ನಲ್ಲಿ ಹೆಸರುವಾಸಿಯಾದ ಅಮೆಜಾನ್ ಕಂಪನಿ ಇದೀಗ ಹರಾಜಿನಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.

2023-2027ರ ಅವಧಿಗೆ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಈ ನಡುವೆ ಹಲವು ಪ್ರತಿಷ್ಠಿತ ಕಂಪನಿಗಳು ಹರಾಜಿನಲ್ಲಿ ಭಾಗವಹಿಸಲು ತಯಾರಿಯಲ್ಲಿದೆ. ಈಗಾಗಲೇ ಅಂಬಾನಿ ಒಡೆತನದ ರಿಲಯನ್ಸ್, ಡಿಸ್ನಿ ಮತ್ತು ಸೋನಿ ಗ್ರೂಪ್ ಪ್ರಸಾರ ಹಕ್ಕು ಪಡೆಯಲು ಮುಂಚೂಣಿಯಲ್ಲಿದೆ. ಈ ನಡುವೆ ಅಚ್ಚರಿ ಎಂಬಂತೆ ಅಮೆಜಾನ್ ಹರಾಜಿನಿಂದ ಹಿಂದೆ ಸರಿಯಲು ಮುಂದಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಕ್ರೀಸ್ ಬಿಟ್ಟು ಕೊಡದ ಪಾಂಡ್ಯ ನಡೆಗೆ ಟೀಕೆ

2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್ ಹಕ್ಕು 33 ಕೋಟಿ ರೂ. ಸಾಧಾರಣವಾಗಿ ಟಿವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

2008ರಲ್ಲಿ ಸೋನಿ ನೆಟ್‍ವರ್ಕ್ 10 ವರ್ಷಗಳ ಅವಧಿಗೆ ಮಾಧ್ಯಮ ಹಕ್ಕುಗಳನ್ನು 8,200 ಕೋಟಿ ರೂ. ನೀಡಿ ಖರೀದಿಸಿತ್ತು. ಆ ಬಳಿಕ 2015ರಲ್ಲಿ ನೋವಿ ಡಿಜಿಟಲ್ ಮೂರು ವರ್ಷಗಳ ಅವಧಿಗೆ ಐಪಿಎಲ್‍ನ ಜಾಗತಿಕ ಡಿಜಿಟಲ್ ಹಕ್ಕುಗಳನ್ನು 302.2 ಕೋಟಿ ರೂ. ನೀಡಿ ಪಡೆದುಕೊಂಡಿತ್ತು.

Comments

Leave a Reply

Your email address will not be published. Required fields are marked *