ಎಚ್‌ಡಿಡಿ ಮನವಿಯನ್ನು ಒಪ್ಪುತ್ತಾ ಕಾಂಗ್ರೆಸ್‌ ಹೈಕಮಾಂಡ್‌?

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ. 3 ಪಕ್ಷಗಳಲ್ಲಿ ಭರ್ಜರಿ ರಾಜಕೀಯ ನಡೆಯುತ್ತಿದ್ದು ಕಾಂಗ್ರೆಸ್ 2ನೇ ಅಭ್ಯರ್ಥಿ ಬೆನ್ನಲ್ಲೇ ಬಿಜೆಪಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 3ನೇ ಅಭ್ಯರ್ಥಿ ಆಗಿ ಲೆಹರ್ ಸಿಂಗ್‍ಗೆ ಟಿಕೆಟ್ ನೀಡಲಾಗಿದೆ. ನಿರ್ಮಲಾ ಸೀತಾರಾಮನ್, ಜಗ್ಗೇಶ್ ಬಳಿಕ ಲೆಹರ್ ಸಿಂಗ್‍ಗೆ ಬಿಜೆಪಿಯ ರಾಜ್ಯಸಭೆ ಟಿಕೆಟ್ ಘೋಷಿಸಲಾಗಿದೆ.

ಕಾಂಗ್ರೆಸ್ 2ನೇ ಅಭ್ಯರ್ಥಿ ಮನ್ಸೂರ್ ಖಾನ್ ಅಖಾಡದಲ್ಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್ ಶಾಸಕರ ಕ್ರಾಸ್ ಓಟಿಂಗ್ ಲೆಕ್ಕಾಚಾರದಲ್ಲಿದೆ. 2016ರಲ್ಲಿ ಜಮೀರ್ ಸೇರಿದಂತೆ ಜೆಡಿಎಸ್‍ನ 8 ಶಾಸಕರು ಕ್ರಾಸ್ ಓಟಿಂಗ್ ಮಾಡಿದ್ದರು. ಈ ಬಾರಿ ಗುಬ್ಬಿ ಶ್ರೀನಿವಾಸ್ ಸೇರಿದಂತೆ ಐವರು ಜೆಡಿಎಸ್ ಶಾಸಕರು ತಮ್ಮ ಅಭ್ಯರ್ಥಿಗೆ ಮತ ಹಾಕಬಹುದು ಎಂಬ ಧೈರ್ಯದಲ್ಲಿ ಕಾಂಗ್ರೆಸ್‌ ಇದೆ ಎನ್ನಲಾಗುತ್ತಿದೆ.  ಇದನ್ನೂ ಓದಿ: ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ- ಲೆಹರ್ ಸಿಂಗ್‍ಗೆ ಟಿಕೆಟ್

ಜೆಡಿಎಸ್‍ಗೆ ಪ್ರತಿಷ್ಠೆಯ ಕಣವಾಗಿರುವ ಕಾರಣ ಕುಪೇಂದ್ರ ರೆಡ್ಡಿಗೆ ಇಂದು ನಾಮಪತ್ರ ಸಲ್ಲಿಸಲು ಸಿದ್ಧವಾಗುವಂತೆ ದೇವೇಗೌಡ ಸೂಚಿಸಿದ್ದಾರೆ. ಕುಪೇಂದ್ರ ರೆಡ್ಡಿಗೆ ಗೆಲ್ಲಲು ಬೇಕಾದ ಮತಗಳನ್ನ ಕಾಂಗ್ರೆಸ್‍ನಿಂದ ಪಡೆಯಲು ಅಗತ್ಯ ಮಾತುಕತೆ ನಡೆಸುವಂತೆ ದೇವೇಗೌಡರು ಸೂಚನೆ ನೀಡಿದ್ದಾರೆ. ಇದಲ್ಲದೆ ಇಂದು ಬೆಳಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆಯೂ ದೇವೇಗೌಡರು ಮಾತುಕತೆ ಮಾಡಲು ನಿರ್ಧಾರ ಮಾಡಿದ್ದು, ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರ ಮನವಿಗೆ ಒಪ್ಪಿದರೆ ಜೆಡಿಎಸ್ ಗೆಲುವು ಪಕ್ಕಾ ಆಗಲಿದೆ.

ಕಾಂಗ್ರೆಸ್ ಹೈಕಮಾಂಡ್ ಒಪ್ಪದೇ ಹೋದರೆ ಬಿಜೆಪಿ ಜೊತೆ ಮಾತುಕತೆ ಬಗ್ಗೆ ಶಾಸಕರ ಜೊತೆ ಅಭಿಪ್ರಾಯ ಸಂಗ್ರಹ ಮಾಡಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿದ್ದರಾಮಯ್ಯ ನಾವು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *