ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

ಮುಂಬೈ: ರಾಜಸ್ಥಾನ ಗೆಲುವಿಗಾಗಿ ಆರಂಭದಲ್ಲಿ ಜೈಸ್ವಾಲ್ ಹೋರಾಟ ನಡೆಸಿದರೆ, ಕೊನೆಗೆ ಅಶ್ವಿನ್ ಉಪಯುಕ್ತ ಬ್ಯಾಟಿಂಗ್ ಮೂಲಕ ರಾಜಸ್ಥಾನ ತಂಡಕ್ಕೆ ಇನ್ನೂ 2 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟರು. ಈ ಜಯದೊಂದಿಗೆ ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಗೆದ್ದಿದ್ದು ಹೇಗೆ?
ಗೆಲ್ಲಲು 151 ರನ್ ಗುರಿ ಪಡೆದ ರಾಜಸ್ಥಾನಕ್ಕೆ ಕೊನೆಯ 12 ಎಸೆತಗಳಲ್ಲಿ ಗೆಲುವಿಗೆ 19 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ 12 ರನ್ ಬಂತು ಕೊನೆಯ ಓವರ್‌ನ 6 ಎಸೆತಗಳಲ್ಲಿ ರಾಜಸ್ಥಾನ ಗೆಲುವಿಗೆ 7 ರನ್ ಬೇಕಾಗಿತ್ತು. ಈ 7 ರನ್‍ಗಳನ್ನು ಮೊದಲ 4 ಎಸೆತಗಳಲ್ಲಿ ಬಾರಿಸಿದ ರಾಜಸ್ಥಾನ ಬ್ಯಾಟ್ಸ್‌ಮ್ಯಾನ್‌ಗಳು 5 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಲು ನೆರವಾದರು. ಅಶ್ವಿನ್ ಅಜೇಯ 40 ರನ್ (23 ಎಸೆತ, 2 ಬೌಂಡರಿ, 3 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿಯಾದರು.

ಇತ್ತ ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿದ ಚೆನ್ನೈ ತಂಡ ಈ ಸೋಲಿನೊಂದಿಗೆ 15ನೇ ಆವೃತ್ತಿ ಐಪಿಎಲ್ ಅಭಿಯಾನ ಕೊನೆಗೊಳಿಸಿದೆ.

ಜೈಸ್ವಾಲ್ ಏಕಾಂಗಿ ಹೋರಾಟ
ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ನಿಧಾನವಾಗಿ ಚೆನ್ನೈ ಬೌಲರ್‌ಗಳಿ ಕಾಡಲು ಆರಂಭಿಸಿದರು. ಇತ್ತ ಸಂಜು ಸ್ಯಾಮ್ಸನ್ 15 ರನ್ (20 ಎಸೆತ, 2 ಬೌಂಡರಿ) ಸಿಡಿಸಿ 2ನೇ ವಿಕೆಟ್‍ಗೆ 51 ರನ್ (41 ಎಸೆತ) ಜೊತೆಯಾಟವಾಡಿ ವಿಕೆಟ್ ಒಪ್ಪಿಸಿದರು. ಇತ್ತ ಜೈಸ್ವಾಲ್ ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದರು. ವಿಕೆಟ್‍ಗಳು ಉರುಳುತ್ತಿದ್ದರು ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಜೈಸ್ವಾಲ್ 59 ರನ್ (44 ಎಸೆತ, 8 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

ಈ ಮೊದಲು ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 2 ರನ್‍ಗಳಿಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ಆ ಬಳಿಕ ಬಂದ ಮೊಯಿನ್ ಅಲಿ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು.

ಅಲಿ ಅಟ್ಟಹಾಸ:
ಡೆವೊನ್ ಕಾನ್ವೇ ಜೊತೆಗೂಡಿದ ಮೊಯಿನ್ ಅಲಿ ರಾಜಸ್ಥಾನ ಬೌಲರ್‌ಗಳ ಪ್ರತಿ ಎಸೆತಗಳಿಗೂ ಲೀಲಾಜಾಲವಾಗಿ ರನ್ ಬಾರಿಸಲು ಮುಂದಾದರು. ಜೊತೆಗೆ ಬೌಂಡರಿ, ಸಿಕ್ಸರ್‌ಗಳ ಮೂಲಕ ಚೆನ್ನೈ ರನ್ ವೇಗವನ್ನು ಏರಿಸಿದರು. ಇತ್ತ ಕಾನ್ವೇ ಮಾತ್ರ ಪರದಾಟ ನಡೆಸಿ 16 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಈ ಮೊದಲು ಅಲಿ ಜೊತೆಗೂಡಿ 2ನೇ ವಿಕೆಟ್‍ಗೆ 83 ರನ್ (39 ಎಸೆತ)ಗಳ ಜೊತೆಯಾಟದಲ್ಲಿ ಭಾಗಿಯಾದರು.

ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಚೆನ್ನೈ ತಂಡಕ್ಕೆ ನಾಯಕ ಧೋನಿ ಕೆಲ ಹೊತ್ತು ನಿಧಾನಗತಿಯ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಇತ್ತ ಅಲಿ ಮಾತ್ರ ಉತ್ತಮ ಇನ್ನಿಂಗ್ಸ್ ಕಟ್ಟಿದ ಪರಿಣಾಮ ಚೆನ್ನೈ ತಂಡ ಸಾಧಾರಣ ಮೊತ್ತ ಪೇರಿಸಿತು.

ಡೆತ್ ಓವರ್‌ಗಳಲ್ಲಿ ಧೋನಿ 26 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಇವರ ಹಿಂದೆಯೇ ಅಲಿ 93 ರನ್ (57 ಎಸೆತ, 13 ಬೌಂಡರಿ, 3 ಸಿಕ್ಸ್) ಚಚ್ಚಿ ಔಟ್‌ ಆಗುವ ಮೂಲಕ 7 ರನ್‍ಗಳಿಂದ ಶತಕ ವಂಚಿತರಾದರು. ಅಂತಿಮವಾಗಿ ಚೆನ್ನೈ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಒಟ್ಟುಗೂಡಿಸಿತು.

Comments

Leave a Reply

Your email address will not be published. Required fields are marked *