ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ – ಅರ್ಜಿ ವಿಚಾರಣೆಗೆ ಗ್ರೀನ್‌ ಸಿಗ್ನಲ್‌

ಲಕ್ನೋ: ಜ್ಞಾನವ್ಯಾಪಿ ಮಸೀದಿ ಸಮೀಕ್ಷೆಗೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಅರ್ಹವಾಗಿದೆ ಎಂದು ಮಥುರಾ ಜಿಲ್ಲಾ ನ್ಯಾಯಾಲಯ ಹೇಳಿದೆ.

ಮಥುರಾ ಶ್ರೀಕೃಷ್ಣನ ಜನ್ಮ ಸ್ಥಳವಾಗಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀ ಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಇವರು ಅಷ್ಟೇ ಅಲ್ಲದೇ ಇನ್ನು ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು.

ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಭಾಗಿ ಮಾಡಲಾಗಿದ್ದು ಮೇ 6 ರಂದು ಕೋರ್ಟ್‌ ವಿಚಾರಣೆಯನ್ನು ಅಂತ್ಯಗೊಳಿಸಿತ್ತು.ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿ ಸಲ್ಲಿಕೆ – ಶಿವಲಿಂಗ ಮಾತ್ರವಲ್ಲ, ತಾವರೆ ಹೂವು, ತ್ರಿಶೂಲ, ಢಮರುಗ ಚಿತ್ರಗಳು ಪತ್ತೆ

ಅರ್ಜಿಯಲ್ಲಿ ಏನಿದೆ?
ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀ ಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *