ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್, ಲಾಲ್‍ಬಾಗ್‍ಗಳಿಗಿಂತ ದೊಡ್ಡ ಪಾರ್ಕ್ ನಿರ್ಮಾಣ: ಮುನಿರತ್ನ

ಬೆಂಗಳೂರು: ಲಾಲ್‍ಬಾಗ್ ಮತ್ತು ಕಬ್ಬನ್ ಪಾರ್ಕ್‍ಗಳು ವಿಶ್ವದಲ್ಲೇ ಖ್ಯಾತಿ ಪಡೆದಿವೆ. ಈಗ ಇವೆರಡು ಪಾರ್ಕ್‍ಗಳಿಗಿಂತಲೂ ದೊಡ್ಡದಾದ ಪಾರ್ಕ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಬಜೆಟ್‍ನಲ್ಲೂ ಘೋಷಣೆ ಮಾಡಲಾಗಿದೆ. ಈಗ ಈ ಬೃಹತ್ ಪಾರ್ಕ್‍ನ ನಿರ್ಮಾಣದ ಕಾರ್ಯಕ್ಕೆ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ ಎಂದು ಸಚಿವ ಮುನಿರತ್ನ ತಿಳಿಸಿದರು.

ವಿಕಾಸಸೌಧದಲ್ಲಿ ಅತಿ ದೊಡ್ಡ ಪಾರ್ಕ್ ನಿರ್ಮಾಣ ಸಂಬಂಧ ತೋಟಗಾರಿಕೆ ಸಚಿವ ಮುನಿರತ್ನ ಅವರು ಇಲಾಖೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ದೊಡ್ಡ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಿತು. ಈ ದೊಡ್ಡ ಪಾರ್ಕ್ ನಿರ್ಮಾಣಕ್ಕೆ 400 ಎಕರೆ ಜಮೀನಿನ ಅಗತ್ಯ ಇದೆ ಎಂದರು.

ಬನ್ನೇರುಘಟ್ಟ ಬಳಿ ಹಾಗೂ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸ್ಥಳ ಗುರುತಿಸಲಾಗಿದೆ. ಇದು ಅರಣ್ಯ ಇಲಾಖೆಯ ಜಾಗ. ಆಗಸ್ಟ್ 15ರೊಳಗೆ ಈ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ವಿಷಯಕ್ಕೆ ಬಂದು ಡಿಕೆಶಿ ಶೇಪ್ ಔಟ್ ಮಾಡಿಕೊಂಡಿದ್ದಾರೆ: ಅಶ್ವಥ್ ನಾರಾಯಣ

ಬೆಂಗಳೂರಿಗೆ ಶುದ್ಧ ಗಾಳಿಯ ಅಗತ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರ್ಕ್ ನಿರ್ಮಾಣ ಗುರಿಯಿದೆ. ಆ ಪಾರ್ಕ್ ಹೆಸರು ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಎಂದು ಹೆಸರಿಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಶುಕ್ರವಾರ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಕ್ಷೆ ತಯಾರಿಸಿ ತರ್ತಾರೆ ಎಂದು ಹೇಳಿದರು.

ಜಾಗ ನಮ್ಮ ವಶಕ್ಕೆ ಬಂದ ನಂತರ ವೆಚ್ಚದ ಅಂದಾಜು ಗೊತ್ತಾಗುತ್ತದೆ. 350 ಎಕರೆಯಲ್ಲಿ ಪಾರ್ಕ್ ನಿರ್ಮಾಣ ಉದ್ದೇಶ ಇದೆ. ಪಾರ್ಕಿನ ಪ್ರಾಥಮಿಕ ವೆಚ್ಚಗಳಿಗೆ ಹತ್ತು ಕೋಟಿ ರೂ ಮೀಸಲಿಡಲಾಗಿದೆ. ಡಿಪಿಆರ್ ನಂತರ ವೆಚ್ಚದ ನಿರ್ಧಾರ ಆಗುತ್ತದೆ. ಈ ಪಾರ್ಕ್ ನಿರ್ಮಾಣಕ್ಕೆ ಅನುದಾನದ ಕೊರತೆ ಆಗಲ್ಲ ಎಂದರು.

ಕಬ್ಬನ್ ಪಾರ್ಕ್, ಲಾಲ್‍ಬಾಗ್‍ಗಿಂತ ದೊಡ್ಡ ಪಾರ್ಕ್ ನಿರ್ಮಾಣ ನಮ್ಮ ಕನಸು, ಗುರಿ. ಈ ಪಾರ್ಕ್ ದೊಡ್ಡ ಲ್ಯಾಂಡ್‍ಮಾರ್ಕ್ ಆಗುತ್ತದೆ. ನಮ್ಮ ಇಲಾಖೆಯಿಂದ ಬೆಂಗಳೂರಿನಲ್ಲಿ ಒಂದು ಹೆಜ್ಜೆ ಗುರುತು ಬಿಡುತ್ತೇವೆ ಎಂದು ತಮ್ಮ ಇಲಾಖೆಯ ಮಹತ್ವದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

Comments

Leave a Reply

Your email address will not be published. Required fields are marked *