ದೆಹಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಹಿಂಸಾಚಾರ ಪ್ರಕರಣ – ಇಬ್ಬರು ಅಪ್ರಾಪ್ತರು ಸೇರಿ 21 ಜನರ ಬಂಧನ

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿ 21 ಮಂದಿ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರದಲ್ಲಿ ಸಬ್ ಇನ್ಸ್‌ಪೆಕ್ಟರ್‌ ಒಬ್ಬರಿಗೆ ಗುಂಡು ಹಾರಿಸಲಾಗಿತ್ತು. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಆ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮ ಜಯಂತಿ ವೇಳೆ ಹಿಂಸಾಚಾರ – ಯುಪಿಯಲ್ಲಿ ಕಟ್ಟೆಚ್ಚರ

ಬಂಧಿತ ಆರೋಪಿಗಳಲ್ಲಿ ಅಪ್ರಾಪ್ತ ಜಹಾಂಗೀರ್ ಪುರಿಯ ಸಿಡಿ ಪಾರ್ಕ್ ನಿವಾಸಿ ಎಂಡಿ ಅಸ್ಲಮ್ ಎಂಬಾತನನ್ನು ವಶಪಡಿಸಿಕೊಳ್ಳಲು ಪೊಲೀಸರು ತೆರಳಿದಾಗ ಆತನ ಬಳಿ ಪಿಸ್ತೂಲ್ ಒಂದು ಪತ್ತೆಯಾಗಿತ್ತು. ಆ ಬಳಿಕ ಪಿಸ್ತೂಲ್ ವಶಪಡಿಸಿಕೊಂಡು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಕೆಲವು ವಾಹನಗಳಿಗೂ ಬೆಂಕಿ ಹಚ್ಚಲಾಗಿತ್ತು. ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) 120 ಬಿ(ಕ್ರಿಮಿನಲ್ ಪಿತೂರಿ) 147 (ಗಲಭೆ) ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

ಏನಿದು ಘಟನೆ:
ದೆಹಲಿಯ ವಾಯುವ್ಯ ಭಾಗದಲ್ಲಿರುವ ಜಹಾಂಗೀರ್ ಪುರಿಯಲ್ಲಿ ಹನುಮ ಜಯಂತಿ ಶೋಭಾಯಾತ್ರೆಯ ವೇಳೆ ಕಲ್ಲು ತೂರಾಟ ನಡೆದಿತ್ತು. ಇದರಿಂದ ಆರಂಭಗೊಂಡ ಎರಡು ಸಮುದಾಯಗಳ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಜಹಾಂಗೀರ್ ಪುರಿ ಘಟನೆಯ ನಂತರ ರಾಜ್ಯದಲ್ಲಿ ಆಯಾ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.

Comments

Leave a Reply

Your email address will not be published. Required fields are marked *