ಶತಕ ಸಿಡಿಸಿ ರಾರಾಜಿಸಿದ ರಾಹುಲ್ – ಮುಂಬೈಗೆ ಸತತ 6ನೇ ಸೋಲು

ಮುಂಬೈ: ಮುಂಬೈ ವಿರುದ್ಧ ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ ಫಲವಾಗಿ ಲಕ್ನೋ 18 ರನ್‌ಗಳಿಂದ ಗೆದ್ದರೆ, 15ನೇ ಆವೃತ್ತಿ ಐಪಿಎಲ್‍ನಲ್ಲಿ ಹೀನಾಯ ಪ್ರದರ್ಶನ ನೀಡಿದ ಮುಂಬೈ ತಂಡ ಸತತ 6ನೇ ಸೋಲುಕಂಡು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದೆ.

ಮುಂಬೈ ಗೆಲುವಿಗೆ ಕೀರನ್ ಪೋಲಾರ್ಡ್ ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದರೂ ಜಯ ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 181 ರನ್ ಸಿಡಿಸಿ 18  ರನ್‌ಗಳಿಂದ ಸೋಲೊಪ್ಪಿಕೊಂಡಿತು.

200 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 6 ರನ್ (7 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಇಶಾನ್ ಕಿಶನ್ 13 ರನ್ (17 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಡೆವಾಲ್ಡ್ ಬ್ರೆವಿಸ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾಗಿ 31 ರನ್ (13 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 37 ರನ್ (27 ಎಸೆತ, 3 ಬೌಂಡರಿ) ಮತ್ತು ತಿಲಕ್ ವರ್ಮಾ 26 ರನ್ (2 ಬೌಂಡರಿ) ಸಿಡಿಸಿ ತಂಡಕ್ಕೆ ಅಲ್ಪಮಟ್ಟಿನ ಕೊಡುಗೆ ನೀಡಿದರು.

ಈ ಮೊದಲು ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ಲಕ್ನೋ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಲಕ್ನೋ ತಂಡ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಂತೆ ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‍ನಲ್ಲಿ ಆರ್ಭಟಿಸಿದರು. ಆರಂಭದಿಂದಲೇ ಮುಂಬೈ ಬೌಲರ್‌ಗಳಿಗೆ ಬೆವರಿಳಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 52 ರನ್ (33 ಎಸೆತ) ಸಿಡಿಸಿ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಫ್ಯಾಬಿಯನ್ ಅಲೆನ್, ಡಿ ಕಾಕ್ 24 ರನ್ (13 ಎಸೆತ, 4 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮುಂಬೈಗೆ ಕಾಡಿದ ಕನ್ನಡಿಗ ಜೋಡಿ
ಡಿ ಕಾಕ್ ಔಟ್ ಆದ ಬಳಿಕ ಜೊತೆಯಾದ ಮನೀಶ್ ಪಾಂಡೆ ಮತ್ತು ಕೆ.ಎಲ್ ರಾಹುಲ್ ತಮ್ಮ ಆಟಕ್ಕೆ ವೇಗ ನೀಡಿದರು. ಇಬ್ಬರೂ ಮುಂಬೈ ಬೌಲರ್‌ಗಳ ಬೆಂಕಿ ಚೆಂಡಿಗೆ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಸಿಡಿಸಿದ ಈ ಜೋಡಿ 2ನೇ ವಿಕೆಟ್‍ಗೆ 72 ರನ್ (47 ಎಸೆತ) ಜೊತೆಯಾಟವಾಡಿತು. ಈ ವೇಳೆ ಮನೀಶ್ ಪಾಂಡೆ 38 ರನ್ (29 ಎಸೆತ, 6 ಬೌಂಡರಿ) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡರು.

ರಾಹುಲ್ ಶತಕದ ವೈಭವ
ಇತ್ತ ರಾಹುಲ್ ಮಾತ್ರ ಮುಂಬೈ ಬೌಲರ್‌ಗಳನ್ನು ಕೊನೆಯ ಎಸೆತದವರೆಗೆ ಕಾಡಿದರು. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ರಾಹುಲ್ ಅಜೇಯ 103 ರನ್ (60 ಎಸೆತ, 9 ಬೌಂಡರಿ, 5 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಲಕ್ನೋ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಸಿಡಿಸಿತು.

ರನ್ ಏರಿದ್ದು ಹೇಗೆ
50 ರನ್ 32 ಎಸೆತ
100 ರನ್ 69 ಎಸೆತ
150 ರನ್ 90 ಎಸೆತ
199 ರನ್ 120 ಎಸೆತ

Comments

Leave a Reply

Your email address will not be published. Required fields are marked *