ಸತ್ಯ ಎದುರಿಸುವ ಸಂದರ್ಭ ಬಂದಾಗ ಕಾಂಗ್ರೆಸ್‌ನವರು ಆ ಶಕ್ತಿ ಪಡೆದುಕೊಳ್ಳಲಿ: ಬೊಮ್ಮಾಯಿ ಟಾಂಗ್

basavaraj bommai (1)

ಗದಗ: ಕಾಂಗ್ರೆಸ್‌ನವರು ಸ್ವಚ್ಛ ಮನಸ್ಸುಗಳಂತೆ ಮಾತನಾಡುತ್ತಾರೆ. ಸ್ವಲ್ಪ ದಿನ ಕಾದರೆ ಸತ್ಯ ಎದುರಿಸುವ ಸಂದರ್ಭ ಕಾಂಗ್ರೆಸ್‌ಗೆ ಬರುತ್ತದೆ. ಆ ಸತ್ಯ ಎದುರಿಸುವ ಶಕ್ತಿ ಕಾಂಗ್ರೆಸ್‌ನವರು ಪಡೆದುಕೊಳ್ಳಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.

ನಗರದ ವಿವೇಕಾನಂದ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ, ಲೂಟಿ ನಡೆದಿದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇದೆ. ಕಾಂಗ್ರೆಸ್ ಸಾಮಾಜಿಕವಾಗಿ ಒಡೆದು ಆಳುವುದು ಹಾಗೂ ತುಷ್ಟೀಕರಣ ನೀತಿ ಪ್ರಾರಂಭಿಸಿತು. ಭ್ರಷ್ಟಾಚಾರ ಪರಂಪರೆಯನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದರು.

ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಇಂದು ಹತಾಶರಾಗಿ ನಮ್ಮ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಶುಭ್ರರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಗಮನಿಸಿದಂತೆ ರಾಜ್ಯದ ವಿರೋಧ ಪಕ್ಷದಲ್ಲಿ ಇಂದು ತೊಳಲಾಟ ಪ್ರಾರಂಭವಾಗಿದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್‌ನವರು ನಾಟಕ ಪ್ರಾರಂಭ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಒಟ್ಟು 49 ಕೇಸ್ – ಬೆಂಗ್ಳೂರಲ್ಲಿ 47 ಇತರ ಎರಡು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ

ನಮ್ಮ ನಾಯಕ ಕೆಎಸ್ ಈಶ್ವರಪ್ಪ ಮೇಲೆ ಕಾಂಗ್ರೆಸ್ ವಿನಾಕಾರಣ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಈಶ್ವರಪ್ಪ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ತನಿಖೆ ನಿಷ್ಠುರವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಹತ್ತಾರು ಹಗರಣಗಳನ್ನು ಮಾಡಿತ್ತು ಜೊತೆಗೆ ಭ್ರಷ್ಟಾಚಾರವನ್ನು ಎಲ್ಲಾ ರಂಗಕ್ಕೂ ಹಬ್ಬಿಸಿತ್ತು. ಈ ಕಾರಣಕ್ಕಾಗಿಯೇ ಜನರು ಅವರನ್ನು ಇಂದು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ನಾಯಕರು ನಾವು ಆ ಭಾಗ್ಯ, ಈ ಭಾಗ್ಯ ಕೊಟ್ಟಿದ್ದೇವೆ ಎಂದರು. ಆದರೆ ಅವೆಲ್ಲವೂ ಭಾಷಣದ ಭಾಗ್ಯಗಳಾಗಿದ್ದು, ರಾಜ್ಯದ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದರು. ಅವರ ಯಾವ ಯೋಜನೆಗಳೂ ಜನರಿಗೆ ಮುಟ್ಟಲಿಲ್ಲ. ಬದಲಾಗಿ, ನಾಯಕರ ಮನೆಗಳಿಗೆ ಹಣ ತಲುಪಿತು ಎಂದು ಆರೋಪಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌

ಕಾಂಗ್ರೆಸ್ ನಾಯಕರು ಈಗಲಾದರೂ ಬುದ್ದಿ ಕಲಿಯಬೇಕು. ಲೋಕಸಭೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡಿದೆ. ಲೋಕಸಭೆಯಲ್ಲಿ ಆದಂತೆ, 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲೂ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್, ಸಂಸದ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಎಸ್‌ವಿ ಸಂಕನೂರ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಮೋಹನ್ ಮಾಳಶೆಟ್ಟಿ, ಶ್ರೀಪತಿ ಭಟ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *