ಬಿಜೆಪಿಯವರು ಸೈಮನ್‌ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸುತ್ತಿದ್ದಾರೆ: ಜಮೀರ್ ಅಹ್ಮದ್

Zameer Ahmed Khan (3)

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಪ್ರಜ್ಞಾವಂತರು, ಅನುಭವಿಗಳು ಎಂದು ಭಾವಿಸಿದ್ದೆ. ಆದರೆ ಅವರು ಛಲವಾದಿಪಾಳ್ಯದ ಯುವಕ ಚಂದ್ರುವಿನ ಕೊಲೆ ಪ್ರಕರಣಕ್ಕೆ ಇಲ್ಲದ ಕಥೆಗಳನ್ನು ತಳುಕು ಹಾಕಿ ಇಷ್ಟು ಕೀಳುಮಟ್ಟದ ಹೇಳಿಕೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜಮೀರ್, ಯಾವುದೇ ಪ್ರಕರಣದ ತನಿಖೆ ಮಾಡುವವರು ಪೊಲೀಸರು. ಬಿಜೆಪಿ ಅಥವಾ ಆರ್‌ಎಸ್‌ಎಸ್ ಅಲ್ಲ. ಇಂದು ಮನಬಂದಂತೆ ಕೀಳುಮಟ್ಟದ ಹೇಳಿಕೆ ನೀಡಿರುವ ಎಂಎಲ್‌ಸಿ ರವಿಕುಮಾರ್ ಅವರೂ ಅಲ್ಲ. ಏಪ್ರಿಲ್ 5 ರ ರಾತ್ರಿ ನಡೆದ ಘಟನೆ ಕುರಿತು ಸ್ವತಃ ಸೈಮನ್ ನೀಡಿರುವ ಹೇಳಿಕೆಯ ಎಫ್‌ಐಆರ್ ಪ್ರತಿಯನ್ನು ಹಿಡಿದು ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದರು. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

ಎಫ್‌ಐಆರ್ ಪ್ರತಿಯಲ್ಲೇನಿದೆ?
ಅಂದು ರಾತ್ರಿ ಛಲವಾದಿಪಾಳ್ಯದ ಮನೆಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಿದ್ದೆವು. ಊಟಕ್ಕಾಗಿ ಚಾಮರಾಜಪೇಟೆ, ಸಿಟಿ ಮಾರ್ಕೆಟ್ ಎಲ್ಲಾ ಕಡೆ ಸುತ್ತಾಡಿದೆವು. ಎಲ್ಲೂ ಊಟ ಸಿಗಲಿಲ್ಲ. ಹಾಗಾಗಿ ಚಿಕನ್ ರೋಲ್ ತಿನ್ನಲು ಗುರದಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ನಮ್ಮ ವಾಹನ ಶಾಹೀದ್ ವಾಹನಕ್ಕೆ ಡಿಕ್ಕಿ ಹೊಡೆಯಿತು.

ಡಿಕ್ಕಿಯ ಪರಿಣಾಮ ಶಾಹೀದ್ ಮತ್ತು ಚಂದ್ರುವಿನ ನಡುವೆ ಮಾತಿಗೆ ಮಾತು ಬೆಳೆದು ಶಾಹೀದ್ ಚಂದ್ರುವಿನ ತೊಡೆಗೆ ಚುಚ್ಚಿದ. ನನಗೆ ಭಯವಾಗಿ ತಕ್ಷಣ ಅಲ್ಲಿಂದ ಓಡಿ ಹೋದೆ. ಪುನಃ ಬೆಳಗಿನ ಜಾವ 4 ಗಂಟೆಗೆ ವಾಪಸ್ ಬಂದು ನೋಡಿದಾಗ ಚಂದ್ರು ರಕ್ತಸ್ರಾವದಿಂದ ಒದ್ದಾಡುತ್ತಿದ್ದ. ತಕ್ಷಣ ಅವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದೆ. ಆದರೂ ಆತ ಬದುಕುಳಿಯಲಿಲ್ಲ ಎಂದು ಚಂದ್ರುವಿನ ಗೆಳೆಯ ಸೈಮನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಟ್ವೀಟ್ ಕೂಡಾ ಮಾಡಿದ್ದಾರೆ. ಇದನ್ನೂ ಓದಿ: ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆ

ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಷ್ಟಕ್ಕೂ ಅವರನ್ನು ನೇಮಿಸಿರುವುದು ನಿಮ್ಮ ಬಿಜೆಪಿ ಸರ್ಕಾರವೇ. ಇದೀಗ ನೀವೇ ಅವರ ಮೇಲೆ ಬೆರಳು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು.

ನೀವು ಸೈಮನ್‌ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸಿರುವುದು ನಮಗೇನೂ ಗೊತ್ತಿಲ್ಲ ಎಂದು ಕೊಂಡಿದ್ದೀರಾ ಮಾನ್ಯ ರವಿಕುಮಾರ್ ಅವರೇ? ನೀವು ಬಾಯಿಗೆ ಬಂದಂತೆ ಬಣ್ಣ ಹಚ್ಚಿ ಕಥೆ ಹೇಳಿದರೆ ಸತ್ಯ ಎಂದಿಗೂ ಸುಳ್ಳಾಗದು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *