13ರ ಬಾಲಕನ ಮೇಲೆ ಪೊಲೀಸ್ ದರ್ಪ – ನಡು ರಸ್ತೆಯಲ್ಲಿ ಕಪಾಳಮೋಕ್ಷ ಮಾಡಿದ ವೀಡಿಯೋ ವೈರಲ್

ಗಾಂಧೀನಗರ: ಗುಜರಾತಿನ ವಡೋದರ ಮಾರುಕಟ್ಟೆಯೊಂದರಲ್ಲಿ ಸಾರ್ವಜನಿಕವಾಗಿ 13 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಿ, ಹಿಗ್ಗಾಮುಗ್ಗ ಥಳಿಸಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಡೋದರಾದ ನಂದೇಸರಿ ಮಾರುಕಟ್ಟೆಯಲ್ಲಿ ಶನಿವಾರ ರಾತ್ರಿ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯನ್ನು ಶಕ್ತಿಸಿಂಹ ಪಾವ್ರಾ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಛಾನಿ ಪೊಲೀಸ್ ಠಾಣೆಗೆ ಲಗತ್ತಿಸಲಾಗಿದೆ ಎಂದು ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಕ್ತಿಸಿಂಹ ಪಾವ್ರಾ ತಮ್ಮ ವಾಹನದಲ್ಲಿ ನಗರದ ಮತ್ತೊಂದು ಪೊಲೀಸ್ ಠಾಣೆಗೆ ಹೋಗಿ, ಹಿಂತಿರುಗುತ್ತಿದ್ದ ವೇಳೆ ಬಾಲಕ ಏನೋ ಗೊಣಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಬೈಕ್‍ನಿಂದ ಕೆಳಗಿಳಿದು ಬಾಲಕನಿಗೆ ಕಪಾಳ ಮೋಕ್ಷ ಮಾಡಿ, ಅವನ ಕೈಯನ್ನು ತಿರುಚಿ ಕಾಲಿನಿಂದ ಒದ್ದಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಈ ಘಟನೆ ಸಂಬಂಧ ದೂರು ದಾಖಲಿಸಿದ ಬಳಿಕ ಐ ವಲಯದ ಉಪ ಪೊಲೀಸ್ ಆಯುಕ್ತರು ಪೊಲೀಸ್ ಅಧಿಕಾರಿಯ ದುರ್ವರ್ತನೆಗೆ ಅಮಾನತುಗೊಳಿಸಿದ್ದಾರೆ.

ಈ ಘಟನೆ ಕುರಿತಂತೆ ವಡೋದರಾದ ಪೊಲೀಸ್ ಕಮಿಷನರ್ ಶಂಶೇರ್ ಸಿಂಗ್ ಅವರು, ಇಂತಹ ದುರ್ನಡತೆ ಹೊಂದಿರುವವರನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ತಕ್ಷಣ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ವಿಚಾರಣೆ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

&

Comments

Leave a Reply

Your email address will not be published. Required fields are marked *