Zomato ದಿಂದ 10 ನಿಮಿಷಗಳಲ್ಲಿ ಫುಡ್ ಡೆಲಿವರಿ ಹೇಗಾಗುತ್ತೆ? ಇಲ್ಲಿದೆ ಮಾಹಿತಿ

ನವದೆಹಲಿ: ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ, ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಗ್ರಾಹಕರ ಮನೆಗೆ ತಲುಪಿಸುವ ಹೊಸ ಫೀಚರ್ ಅನ್ನು ಪರಿಚಯಿಸುವುದಾಗಿ ಘೋಷಿಸಿತ್ತು. ಆದರೆ ಕೇವಲ 10 ನಿಮಿಷಗಳಲ್ಲಿ ಫುಡ್ ಡೆಲಿವರಿ ಹೇಗೆ ಸಾಧ್ಯ ಎಂಬುದು ಇದೀಗ ಆಹಾರ ಪ್ರಿಯರಲ್ಲಿ ಮೂಡುತ್ತಿರುವ ಪ್ರಶ್ನೆ.

ಈ ಗೊಂದಲಕ್ಕೆ ಇದೀಗ ಝೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಉತ್ತರಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಿದ ಗೋಯಲ್, ಆಹಾರ ಪ್ರಿಯರ ಹಾಗೂ ನೆಟ್ಟಿಗರ ಗೊಂದಲವನ್ನು ತಣಿಸಿದ್ದಾರೆ. ಸೋಮವಾರ ದೀಪಿಂದರ್ ಗೋಯಲ್ 10 ನಿಮಿಷಗಳ ಡೆಲಿವರಿ ಫೀಚರ್ ಶೀಘ್ರವೇ ಬರಲಿದೆ ಎಂದು ಟ್ವೀಟ್ ಮಾಡಿದ್ದರು. ಆಗಿನಿಂದ ಹಲವರು 10 ನಿಮಿಷಗಳ ಡೆಲಿವರಿ ಅಸಾಧ್ಯ ಎಂಬುದಾಗಿ ರೀ-ಟ್ವೀಟ್ ಮಾಡಿದ್ದರು. ಮಂಗಳವಾರ ಮತ್ತೆ ಟ್ವೀಟ್ ಮಾಡಿರುವ ಗೋಯಲ್, ಗಮನಿಸಬೇಕಾದ ಅಂಶಗಳ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: ಆರ್ಡರ್‌ ಮಾಡಿದ 10 ನಿಮಿಷಕ್ಕೆ ನಿಮ್ಮ ಮನೆ ಬಾಗಿಲಿಗೆ ಫುಡ್‌ ಡೆಲಿವರಿ- ಝೊಮ್ಯಾಟೊ ಹೊಸ ಫೀಚರ್‌

ಗೋಯಲ್ ಎಲ್ಲರೂ ಗೊಂದಲಕ್ಕೊಳಗಾಗುವ ಮೊದಲು 2 ನಿಮಿಷಗಳನ್ನು ತೆಗೆದುಕೊಂಡು ಈ ಅಂಶಗಳನ್ನು ಓದಲು ಸೂಚಿಸಿದ್ದಾರೆ. 10 ನಿಮಿಷಗಳ ಡೆಲಿವರಿ ನಿರ್ದಿಷ್ಟ, ಹತ್ತಿರದ ಸ್ಥಳಗಳಿಗೆ, ಜನಪ್ರಿಯ ಹಾಗೂ ಪ್ರಾಮಾಣಿಕೃತ ಮೆನು ಐಟಂಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ವಿವರಿಸಿದ್ದಾರೆ. 10 ರಿಂದ 20 ನಿಮಿಷಗಳ ಡೆಲಿವರಿಗೆ ಪ್ರಯತ್ನ ಪಡಲಾಗುತ್ತದೆ. ಆದರೆ ನಿರ್ದಿಷ್ಟ ಸಮಯದ ಭರವಸೆ ನೀಡಲಾಗುವುದಿಲ್ಲ. ಒಂದುವೇಳೆ ಡೆಲಿವರಿ ತಡವಾದಲ್ಲಿ ದಂಡ ವಿಧಿಸುವಂತಹ ಕ್ರಮಗಳಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ರಾಜಧಾನಿ- ಜಗತ್ತಿನ ಟಾಪ್‌ 50ರಲ್ಲಿ ಭಾರತದ 35 ನಗರಗಳು

10 ನಿಮಿಷಗಳ ಡೆಲಿವರಿ ಸೇವೆಗೆ ಕೆಲವು ನಿರ್ದಿಷ್ಟ ಗ್ರಾಹಕ ಸ್ಥಳಗಳಲ್ಲಿ ಮಾತ್ರ ಹೊಸ ಆಹಾರ ಕೇಂದ್ರಗಳನ್ನು ತೆರೆಯಲಾಗುವುದು. ಜನಪ್ರಿಯ, ಉತ್ತಮ ಹಾಗೂ 2 ನಿಮಿಷಗಳಲ್ಲಿ ಪ್ಯಾಕ್ ಆಗಬಹುದಾದಂತಹ ಐಟಂಗಳಿಗೆ ಮಾತ್ರವೇ ಈ ಫೀಚರ್ ಅನ್ವಯವಾಗುತ್ತದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *