500 ಸ್ವಯಂಸೇವಕರಿಂದ ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯ

ರಾಯಚೂರು: ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಇದೀಗ ತುಂಗಾರತಿ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ತುಂಗಭದ್ರಾ ನದಿಯ ಸ್ವಚ್ಛತೆಗೆ ನೂರಾರು ಜನ ಸ್ವಯಂ ಸೇವಕರು ಮುಂದಾಗಿದ್ದಾರೆ. ಯುವ ಬ್ರಿಗೇಡ್ ಹಾಗೂ ರಾಯರ ಮಠದ ನೇತೃತ್ವದಲ್ಲಿ ನದಿ ಸ್ವಚ್ಛಗೊಳಿಸಲಾಗುತ್ತಿದೆ.

ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪವಿತ್ರ ತಾಣ. ತುಂಗಭದ್ರೆ ತಟದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನಿತ್ಯ ಭಕ್ತರ ದಂಡು ಹರಿದು ಬರುತ್ತಲೇ ಇರುತ್ತದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಪಾಪ ಕಳೆದುಕೊಳ್ಳಲು ತುಂಗಭದ್ರೆಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಜೊತೆಗೆ ತಮ್ಮ ಬಟ್ಟೆ ಸೇರಿದಂತೆ ನಾನಾ ವಸ್ತುಗಳನ್ನು ನದಿಗೆ ಬಿಟ್ಟುಬಿಡುತ್ತಾರೆ. ಇದನ್ನೂ ಓದಿ: ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ: ಶೋಭಾ ಕರಂದ್ಲಾಜೆ

ಭಕ್ತರ ಪಾಪ ಕಳೆಯುವ ತುಂಗಭದ್ರಾ ನದಿ ಈಗ ಮಲೀನವಾಗಿದೆ. ತುಂಗಾರಾಧನೆ ಹೆಸರಲ್ಲಿ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ ಈಗ ಆರಂಭವಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರೀಗೆಡ್‌ನ 500 ಜನರ ತಂಡ ತುಂಗಭದ್ರಾ ನದಿ ಸ್ವಚ್ವತೆಗೆ ಮುಂದಾಗಿದೆ. ಮಾರ್ಚ್ 12 ಹಾಗೂ 13 ರಂದು ಎರಡು ದಿನಗಳ ಕಾಲ ನದಿ ಸ್ವಚ್ಚತಾ ಕಾರ್ಯ ನಡೆಯಲಿದೆ.

ತುಂಗಭದ್ರೆಯ ಮಲೀನತೆ ಕಳೆಯಲು ಮುಂದಾಗಿರುವ ಯುವ ಬ್ರೀಗೆಡ್ ಸದಸ್ಯರೊಂದಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠವೂ ಕೂಡ ಕೈ ಜೋಡಿಸಿದೆ. ನಾಡಿನ ವಿವಿಧೆಡೆಯಿಂದ ಬಂದವರಿಗೆ ವಸತಿ, ಊಟದ ಸೌಕರ್ಯ ಅಗತ್ಯ ಸಲಕರಣೆಗಳನ್ನು ಮಠ ಪೂರೈಸಿದೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ಯಾರು, ಎಲ್ಲಿ ಮಾಡಿದರೂ ರಾಘವೇಂದ್ರ ಸ್ವಾಮಿಗಳ ಮಠ ಸಹಕಾರ ನೀಡಲಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಲ್ಯಾಂಡ್ ಮಾಫಿಯಾ ಸೇರಿ ಎಲ್ಲಾ ಮಾಫಿಯಾಗಳನ್ನ ರಾಜ್ಯದಲ್ಲಿ ಬಗ್ಗುಬಡಿಯುತ್ತೇವೆ: ಬೊಮ್ಮಾಯಿ

ಒಟ್ಟಿನಲ್ಲಿ ಕಸದಿಂದ ತುಂಬಿದ್ದ ತುಂಗಭದ್ರಾ ನದಿ ಈಗಲಾದರೂ ಸ್ವಚ್ಛವಾಗುತ್ತಿದೆ ಎನ್ನುವುದೇ ಸಮಾಧಾನಕರ ಸಂಗತಿ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಯುವಬ್ರಿಗೇಡ್ ಸ್ವಯಂ ಸೇವಕರು ನದಿ ಸ್ವಚ್ಛ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಮುಂದಾದರೂ ತೀರ್ಥ ಕ್ಷೇತ್ರಗಳಿಗೆ ತೆರಳುವ ಜನರು ಸ್ವಚ್ಛತೆ ಕಾಪಾಡಬೇಕಿದೆ.

Comments

Leave a Reply

Your email address will not be published. Required fields are marked *