1000ನೇ ಏಕದಿನ ಪಂದ್ಯ ಗೆದ್ದು ಸ್ಮರಣೀಯವಾಗಿಸಿಕೊಂಡ ಭಾರತ – ವಿಂಡೀಸ್‍ಗೆ ಹೀನಾಯ ಸೋಲು

ಅಹಮದಾಬಾದ್: 1000ನೇ ಏಕದಿನ ಪಂದ್ಯವನ್ನು ಆಡಿದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ 6‌ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸ್ಮರಣೀಯಗೊಳಿಸಿಕೊಂಡಿದೆ.

177 ರನ್‍ಗಳ ಗುರಿ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 60 ರನ್ (51 ಎಸೆತ, 10 ಬೌಂಡರಿ, 1 ಸಿಕ್ಸ್) ಮತ್ತು ಇಶಾನ್ ಕಿಶಾನ್ 28 ರನ್ (36 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ಮೊದಲ ವಿಕೆಟ್‍ಗೆ 84 ರನ್ (79 ಎಸೆತ) ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?

ನಂತರ ಬಂದ ವಿರಾಟ್ ಕೊಹ್ಲಿ 8 ರನ್ (4 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗಿ ನಿರಾಸೆ ಮೂಡಿಸಿದರು. ಇನ್ನೊಂದೆಡೆ ರಿಷಭ್ ಪಂತ್ 11 ರನ್ (9 ಎಸೆತ, 2 ಬೌಂಡರಿ) ಬಾರಿಸಿ ಆಡುತ್ತಿದ್ದಾಗ ಅನ್‍ಲಕ್ಕಿ ಎಂಬಂತೆ ರನೌಟ್ ಆಗಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್ ಅಜೇಯ 34 ರನ್‌ (36 ಎಸೆತ, 5 ಬೌಂಡರಿ) ಮತ್ತು ದೀಪಕ್ ಹೂಡ 26 ರನ್ (32 ಎಸೆತ, 2 ಬೌಂಡರಿ) ಸಿಡಿಸಿ, 28 ಓವರ್‌ ಮುಕ್ತಾಯಕ್ಕೆ 178 ರನ್‌ ಗುರಿ ತಲುಪಿ ತಂಡಕ್ಕೆ ಜಯ ತಂದು ಕೊಟ್ಟರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.

ಚಾಹಲ್, ಸುಂದರ್ ಸ್ಪಿನ್‌  ಮೋಡಿ:
ಈ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ಭಾರತದ ಸ್ಪಿನ್ ಜೋಡಿ ಮುಂದೆ ಅಟ್ಟರ್ ಫ್ಲಾಪ್‌ ಆಯಿತು. ಶಾಯ್ ಹೋಪ್ 8 ರನ್ (10 ಎಸೆತ, 2 ಬೌಂಡರಿ), ಬ್ರಾಂಡನ್ ಕಿಂಗ್ 13 ರನ್ (26 ಎಸೆತ, 2 ಬೌಂಡರಿ) ಡ್ಯಾರೆನ್ ಬ್ರಾವೋ 18 ರನ್ (34 ಎಸೆತ, 3 ಬೌಂಡರಿ), ಶಮರ್ ಬ್ರೂಕ್ಸ್ 12 ರನ್ (26 ಎಸೆತ) ಮತ್ತು ನಿಕೋಲಸ್ ಪೂರನ್ 18 ರನ್ (25 ಎಸೆತ, 3 ಬೌಂಡರಿ) ಸಿಡಿಸಿ ಭಾರತದ ಬೌಲರ್‌ಗಳ ದಾಳಿಗೆ ವಿಕೆಟ್ ನೀಡಿ ಹೊರನಡೆದರು.

ಹೋಲ್ಡರ್ ಏಕಾಂಗಿ ಹೋರಾಟ:
ನಾಯಕ ಕೀರಾನ್ ಪೊಲಾರ್ಡ್ ಶೂನ್ಯಕ್ಕೆ ಔಟ್ ಆಗುತ್ತಿದ್ದಂತೆ ವೆಸ್ಟ್ ಇಂಡೀಸ್ 71 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಜೇಸನ್ ಹೋಲ್ಡರ್ ಮತ್ತು ಫ್ಯಾಬಿಯನ್ ಅಲೆನ್ 78 ರನ್ (91 ಎಸೆತ) ಜೊತೆಯಾಟವಾಡಿದರು. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

ಈ ವೇಳೆ ಮತ್ತೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್, ಫ್ಯಾಬಿಯನ್ ಅಲೆನ್ 29 ರನ್ (43 ಎಸೆತ, 2 ಬೌಂಡರಿ) ವಿಕೆಟ್ ಬೇಟೆಯಾಡಿದರು. ಆದರೆ ಇತ್ತ ಉತ್ತಮವಾಗಿ ಬ್ಯಾಟ್‍ಬೀಸಿದ ಜೇಸನ್ ಹೋಲ್ಡರ್ 57 ರನ್ (71 ಎಸೆತ, 4 ಸಿಕ್ಸ್) ಅರ್ಧಶತಕ ಸಿಡಿಸಿ ಔಟ್ ಆದರು. ನಂತರ ಕಡೆಯಲ್ಲಿ  ಜೋಸೆಫ್ 13 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆಗುವುದರೊಂದಿಗೆ ಅಂತಿಮವಾಗಿ 43.5 ಓವರ್‌ಗಳಲ್ಲಿ 176 ರನ್‍ಗಳಿಗೆ ಆಲೌಟ್ ಆಯಿತು.

ಭಾರತದ ಪರ ಚಹಲ್ 4 ಮತ್ತು ಸುಂದರ್ 3 ವಿಕೆಟ್ ಕಿತ್ತು ಮಿಂಚಿದರು. ಪ್ರಸಿದ್ಧ್ ಕೃಷ್ಣ 2 ಮತ್ತು ಸಿರಾಜ್ 1 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

Comments

Leave a Reply

Your email address will not be published. Required fields are marked *