ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

ಮುಂಬೈ: ಲತಾ ಮಂಗೇಶ್ಕರ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಅಂತ ನಂಬಲಾಗುತ್ತಿಲ್ಲ ಎಂದು ಬಾಲಿವುಡ್ ಖ್ಯಾತ ಹಿರಿಯ ನಟ ಧರ್ಮೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಧರ್ಮೇಂದ್ರ ಅವರು ಲತಾ ಮಂಗೇಶ್ಕರ್ ಅವರ ಜೊತೆ ಪ್ರೀತಿಯಿಂದ ಅಪ್ಪಿಕೊಂಡ ಪೋಸ್ಟ್‌ವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಗಾಯಕಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇಡೀ ಜಗತ್ತು ನಿಮ್ಮಂತಹ ಧಿಮಂತ ಮಹಿಳೆಯನ್ನು ಕಳೆದುಕೊಂಡ ದುಃಖದಲ್ಲಿದೆ. ನೀವು ನಮ್ಮನ್ನು ತೊರೆದಿದ್ದೀರಿ ಅನ್ನುವದನ್ನೆ ನಂಬಲಾಗುತ್ತಿಲ್ಲ. ಲತಾ ಜೀ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ.

ಲತಾ ಮಂಗೇಶ್ಕರ್‍ರವರು ಧರ್ಮೇಂದ್ರ ಮತ್ತು ಅವರ ಪತ್ನಿ ಹೇಮಾ ಮಾಲಿನಿ ಇಬ್ಬರನ್ನೂ ತುಂಬಾ ಇಷ್ಟಪಡುತ್ತಿದ್ದರು. ಅವರು, ಡಿಯೋಲ್ ಕುಟುಂಬದೊಂದಿಗೆ ಅತ್ಯಂತ ಸೌಹಾರ್ದಯುತ ಮತ್ತು ವಿಶೇಷ ಸಂಬಂಧವನ್ನು ಹೊಂದಿದ್ದರು. ಲತಾ ಅವರು ಹಿರಿಯ ನಟನ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

ಧರ್ಮೇಂದ್ರ ಅವರ ಹಲವು ಚಿತ್ರಗಳಿಗೆ ಲತಾ ಮಂಗೇಶ್ಕರ್ ತಮ್ಮ ಧ್ವನಿಯನ್ನು ನೀಡಿದ್ದು, ಅವುಗಳಲ್ಲಿ `ಸಾಥಿಯಾ ನಹಿ ಜಾನಾ ಕೆ ಜೀ ನಾ ಲಗೇ`, `ಕಲ್ ಕಿ ಹಸೀನ್ ಮುಲಾಕತ್ ಕೆ ಲಿಯೇ`, `ಗಿರ್ ಗಯಾ ಜುಮ್ಕಾ ಗಿರ್ನೆ ದೋ`, `ಜಿಲ್ಮಿಲ್ ಸಿತಾರೋನ್ ಕಾ ಅಂಗನ್ ಹೋಗಾ`, ಹೀಗೆ ಅನೇಕ ಹಾಡುಗಳಿಗೆ ತಮ್ಮ ಹಿನ್ನೆಲೆ ಗಾಯನವನ್ನು ನೀಡಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ಜನವರಿಯಲ್ಲಿ ಕೋವಿಡ್ -19 ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 8 ರಂದು, 92 ವರ್ಷ ವಯಸ್ಸಿನ ಗಾಯಕಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೋವಿಡ್‍ನಿಂದ ಚೇತರಿಸಿಕೊಂಡ ನಂತರವೂ, ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Comments

Leave a Reply

Your email address will not be published. Required fields are marked *