ಆಹಾರಕ್ಕಾಗಿ ಅಪ್ಘಾನ್‌ ಜನರಿಂದ ಮಕ್ಕಳು, ದೇಹದ ಅಂಗಾಂಗಗಳ ಮಾರಾಟ

ಕಾಬೂಲ್‌: ತಾಲಿಬಾನಿಗಳು ಸರ್ಕಾರವನ್ನು ಸ್ಥಾಪಿಸಿದ ನಂತರ ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಿದೆ. ಇಲ್ಲಿನ ಜನರು ಆಹಾರಕ್ಕಾಗಿ ತಮ್ಮ ಮಕ್ಕಳನ್ನು ಮಾರುತ್ತಿದ್ದಾರೆ. ಅಲ್ಲದೇ ತಮ್ಮ ದೇಹದ ಅಂಗಾಂಗಗಳನ್ನು ಮಾರುತ್ತಿದ್ದಾರೆ ಎಂದು ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯೂಎಫ್‌ಪಿ) ಯುಎನ್‌ ಮುಖ್ಯಸ್ಥ ಕಳವಳ ವ್ಯಕ್ತಪಡಿಸಿದ್ದಾರೆ.

ಡಬ್ಲ್ಯೂಎಫ್‌ಪಿ ಮುಖ್ಯಸ್ಥ ಡೇವಿಡ್‌ ಬೇಸ್ಲಿ, ಅಫ್ಘಾನಿಸ್ತಾನದಲ್ಲಿ ಅರ್ಧದಷ್ಟು ಜನಸಂಖ್ಯೆಯು ಹಸಿವಿನಿಂದ ಬಳಲುತ್ತಿರುವುದರಿಂದ ಜಾಗತಿಕ ಸಮುದಾಯವು ನೆರವು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಗ್ದಾದ್ ವಿಮಾನ ನಿಲ್ದಾಣದ ಬಳಿ 3 ರಾಕೆಟ್‍ಗಳ ದಾಳಿ

ಬರ, ಸಾಂಕ್ರಾಮಿಕ, ಆರ್ಥಿಕ ಕುಸಿತ, ನಿರಂತರ ಸಂಘರ್ಷಗಳ ನಡುವೆ ಅಫ್ಘಾನಿಸ್ತಾನದ ಜನರು ದಿಕ್ಕೆಟ್ಟಿದ್ದಾರೆ. ಈ ಗಂಭೀರ ಸಮಸ್ಯೆಗಳ ವಿರುದ್ಧ ಸಂಘರ್ಷ ನಡೆಸುತ್ತಿದ್ದಾರೆ. ದೇಶದಲ್ಲಿ ಸುಮಾರು 2.4 ಕೋಟಿ ಜನರು ಆಹಾರ ಅಭದ್ರತೆಯಿಂದ ನರಳುತ್ತಿದ್ದಾರೆ. ಚಳಿಗಾಲದ ಪರಿಸ್ಥಿತಿಯಲ್ಲಿ ದೇಶದ ಅರ್ಧದಷ್ಟು ಜನರು ಕ್ಷಾಮವನ್ನು ಎದುರಿಸುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಶೇ.97ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗೆ ಬೀಳಬಹುದು.

ತಾಲಿಬಾನ್‌ ಸಂಘರ್ಷದಿಂದಾಗಿ ಕಳೆದ 20 ವರ್ಷಗಳಿಂದಲೂ ವಿಶ್ವದಲ್ಲೇ ಅತ್ಯಂತ ಬಡರಾಷ್ಟ್ರವಾಗಿ ಅಫ್ಘಾನಿಸ್ತಾನ ಗುರುತಿಸಿಕೊಂಡಿದೆ. ಇದನ್ನೂ ಓದಿ: ಹೊಸ ವೈರಸ್‌ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!

ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಅಪ್ಘಾನಿಸ್ತಾನದಿಂದ ತಮ್ಮ ಸೇನಾಪಡೆಯನ್ನು ವಾಪಸ್‌ ಕರೆಸಿಕೊಂಡವು. ಪರಿಣಾಮವಾಗಿ ತಾಲಿಬಾನ್‌ ಸುಲಭವಾಗಿ ದೇಶದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿತು. ಪ್ರಸ್ತುತ ದೇಶದಲ್ಲಿ ಮಾನವೀಯ ಬಿಕ್ಕಟ್ಟು ಏರ್ಪಟ್ಟಿದೆ. ಆದರೂ ಕೆಲವು ಅಂತಾರಾಷ್ಟ್ರೀಯ ದತ್ತಿಗಳು ಮತ್ತು ಸಹಾಯ ಗುಂಪುಗಳು, ಸ್ಥಳೀಯ ಜನರಿಗೆ ಸಹಾಯ ಹಸ್ತ ನೀಡುತ್ತಿವೆ.

Comments

Leave a Reply

Your email address will not be published. Required fields are marked *