ಆಫ್ರಿಕಾ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ವೀಕ್ಷಣೆಗಾಗಿ ನೂಕಾಟ, ಕಾಲ್ತುಳಿತ – 8 ಬಲಿ

ಕ್ಯಾಮರೂನ್: ಆಫ್ರಿಕಾ ಕಪ್‌ ಆಫ್‌ ನೇಷನ್ಸ್‌ ಪಂದ್ಯಕ್ಕೂ ಮುನ್ನ ಕ್ಯಾಮರೂನಿಯನ್‌ ಫುಟ್‌ಬಾಲ್‌ ಕ್ರೀಡಾಂಗಣದ ಹೊರಗೆ ಉಂಟಾದ ನೂಕಾಟ, ಕಾಲ್ತುಳಿತದಿಂದಾಗಿ 8 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಆತಿಥೇಯ ರಾಷ್ಟ್ರ ಕೊಮೊರೊಸ್‌ ಪಂದ್ಯವನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಜನಸಮೂಹ ರಾಜಧಾನಿ ಯೌಂಡೆಯ ಒಲೆಂಬೆ ಕ್ರೀಡಾಂಗಣದ ದಕ್ಷಿಣ ಪ್ರವೇಶದ್ವಾರದ ಮೂಲಕ ಪ್ರವೇಶಿಸಲು ಪ್ರಯತ್ನಿಸಿತು. ಈ ವೇಳೆ ನೂಕುನುಗ್ಗಲು, ಕಾಲ್ತುಳಿತದಿಂದ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಸೇರಿ 8 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು

ಕೋವಿಡ್‌ ಕಾರಣದಿಂದಾಗಿ ಕ್ರೀಡೆ ವೀಕ್ಷಣೆಗೆ 60,000 ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪಂದ್ಯ ವೀಕ್ಷಣೆಗೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದಾರೆ. ಇದರಿಂದ ಅನಾಹುತ ಆಗಿದೆ. ಭದ್ರತಾ ಲೋಪವೂ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

ಗಾಯಗೊಂಡವರನ್ನು ಆಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಕಾಲ್ತುಳಿತದಿಂದಾಗಿ 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ತಲೆಗೆ ಹೆಚ್ಚಿ ಪೆಟ್ಟು ಬಿದ್ದಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಜನಸಂದಣಿಯಲ್ಲಿ ಮಗುವೊಂದು ಕಾಲ್ತುಳಿತಕ್ಕೆ ಸಿಲುಕಿತ್ತು. ತಕ್ಷಣ ಮಗುವನ್ನು ರಕ್ಷಿಸಲಾಗಿದ್ದು, ಯೌಂಡೆ ಜನರಲ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

ಕ್ಯಾಮರೂನ್‌ ಆರೋಗ್ಯ ಸಚಿವ ಮನೌಡಾ ಮಲಾಚಿ ಅವರು ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಹಾಗೂ ಆರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *