ನನಗೆ ಸಚಿವ ಸ್ಥಾನಕ್ಕಿಂತ ಪಕ್ಷದ ಸಂಘಟನೆ ಹೆಚ್ಚು ಖುಷಿ ನೀಡುತ್ತದೆ: ಕೆ.ಎಸ್ ಈಶ್ವರಪ್ಪ

ESHWARAPPA

ಶಿವಮೊಗ್ಗ: ಚುನಾವಣೆಗೆ ಇನ್ನೂ 1 ವರ್ಷ 3 ತಿಂಗಳು ಮಾತ್ರ ಬಾಕಿ ಇದೆ. ಸದ್ಯ 4 ಸಚಿವ ಸ್ಥಾನಗಳು ಖಾಲಿ ಇದೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರುವುದು ಸ್ವಾಭಾವಿಕ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ಕುಳಿತು ಚರ್ಚೆ ಮಾಡಿ, ಉಳಿದ 4 ಸ್ಥಾನಗಳಿಗೆ ಯಾರನ್ನು ತುಂಬಬೇಕು. ಯಾರನ್ನು ತುಂಬಿದರೆ ಒಳ್ಳೆಯದು. ಎಲ್ಲಾ ಜಿಲ್ಲೆ, ಎಲ್ಲಾ ಸಮಾಜ ಗಮನದಲ್ಲಿಟ್ಟುಕೊಂಡು ಚಿಂತನೆ ನಡೆಸಿ ಭರ್ತಿ ಮಾಡುತ್ತಾರೆ. ಹುದ್ದೆ ಅಂದಾಕ್ಷಣ ರಾಜಕಾರಣದಲ್ಲಿ ಇರುವವರು ನಾನು ಮಂತ್ರಿ ಆಗಬೇಕು ಅಂತಾ ಯೋಚನೆ ಮಾಡುವುದು ತಪ್ಪಲ್ಲ ಎಂದರು. ಇದನ್ನೂ ಓದಿ: ಬೆಂಗಳೂರು ನಗರಕ್ಕೆ ಸಿಎಂ ಸೇರಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ – ಯಾರಿಗೆ ಯಾವ ಜಿಲ್ಲೆ?

ಸಚಿವ ಸಂಪುಟದಲ್ಲಿ 4 ಸ್ಥಾನ ಖಾಲಿ ಇವೆ. ಹೀಗಾಗಿ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದೆಯೇ ವಿನಃ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಬಿಲ್ ಕುಲ್ ಚರ್ಚೆ ಇಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ನಡೆದ ಎಲ್ಲಾ ಚುನಾವಣೆ ಗೆದ್ದುಕೊಂಡು ಬಂದಿದ್ದೇವೆ. ಕಟೀಲ್ ಅವರು ಒಳ್ಳೆಯ ಸಂಘಟನೆ ಚತುರರು. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದರು.

ಪಕ್ಷ ನನಗೆ ಏನು ಜವಾಬ್ದಾರಿ ಕೊಡುತ್ತದೋ ಅದನ್ನು ಈ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇನೆ. ಮಂತ್ರಿ ಆಗು ಅಂದಾಗ ಮಂತ್ರಿ ಆಗಿದ್ದೇನೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅಧ್ಯಕ್ಷನಾಗು ಅಂದಾಗ ಅಧ್ಯಕ್ಷನಾಗಿದ್ದೇನೆ. ಕೇಂದ್ರ ಹಾಗೂ ರಾಜ್ಯದ ನಾಯಕರು ಮತ್ತು ಸಂಘ ಪರಿವಾರದ ಮುಖಂಡರು ಏನು ಸ್ಥಾನ ತೆಗೆದುಕೊಳ್ಳಬೇಕು ಅಂತಾರೋ, ಅದಕ್ಕೆ ನಾನು ಸಿದ್ಧನಿದ್ದೇನೆ. ಪಕ್ಷ ನನಗೆ ಪಕ್ಷದ ಸಂಘಟನೆ ಜವಾಬ್ದಾರಿ ನೀಡಿದರೆ, ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ನನಗೆ ಮಂತ್ರಿ ಸ್ಥಾನಕ್ಕಿಂತ ಪಕ್ಷದ ಸಂಘಟನೆಯೇ ಹೆಚ್ಚು ಖುಷಿ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Comments

Leave a Reply

Your email address will not be published. Required fields are marked *