ಕುರಿ, ಮೇಕೆಗಳಿಗೆ ನೀಲಿ ನಾಲಿಗೆ ರೋಗ – ರೈತರಲ್ಲಿ ಆತಂಕ

ತುಮಕೂರು: ಕುರಿ, ಮೇಕೆ ಸಾಕಾಣಿಕೆ ಮಾಡುವ ಮೂಲಕ ಸಾಕಷ್ಟು ಮಂದಿ ಬದುಕು ರೂಪಿಸಿಕೊಂಡಿದ್ದು, ಆಗಾಗ ಕಾಡುವ ರೋಗ ರುಜಿನಗಳು ರೈತರನ್ನು ಬಾಧಿಸುತ್ತಿವೆ. ಈಗ ನೀಲಿ ನಾಲಿಗೆ ರೋಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾವಿರಾರು ಕುರಿ, ಮೇಕೆ ಸಾವನ್ನಪ್ಪುತ್ತಿವೆ.

ಅತಿ ಹೆಚ್ಚು ಕುರಿ, ಮೇಕೆಗಳನ್ನು ಸಾಕಾಣಿಕೆ ಮಾಡುವ ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆಯೂ ಒಂದಾಗಿದ್ದು, ಹಿಂದಿನ ವರ್ಷಗಳಲ್ಲಿ ಅಲ್ಲಲ್ಲಿ ಮಾತ್ರ ನೀಲಿ ನಾಲಿಗೆ ರೋಗ ಕಾಣಿಸಿಕೊಳ್ಳುತಿತ್ತು. ಆದರೆ ಈ ಬಾರಿ ಜಿಲ್ಲೆಯ ಎಲ್ಲೆಡೆ ಕಾಡುತ್ತಿದೆ. ಕುಣಿಗಲ್‍ನಿಂದ ಶಿರಾ, ಪಾವಗಡದವರೆಗೆ, ತುಮಕೂರಿನಿಂದ ತಿಪಟೂರು ತಾಲೂಕಿನವರೆಗೂ ವ್ಯಾಪಿಸಿದೆ. ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾಳಾಗಿದ್ದು, ಉತ್ತಮ ಮಳೆಯಾಗಿರುವುದರಿಂದ ಜಾನುವಾರುಗಳ ಮೇವಿಗೆ ಕೊರತೆ ಆಗುವುದಿಲ್ಲ. ಚೆನ್ನಾಗಿ ಸಾಕಾಣಿಕೆ ಮಾಡಿ, ಬೆಳೆ ನಷ್ಟವನ್ನು ಜಾನುವಾರುಗಳ ಆದಾಯದ ಮೂಲಕ ಕಾಣುವ ಲೆಕ್ಕಾಚಾರ ನಡೆಸಿದವರಿಗೆ ರೋಗ ಬರ ಸಿಡಿಲಿನಂತೆ ಬಂದೆರಗಿದೆ. ಇದನ್ನೂ ಓದಿ: ಅಪ್ರಾಪ್ತೆಯನ್ನು ಮದುವೆಯಾಗಿ ರೇಪ್ ಮಾಡಿದ್ದ ವ್ಯಕ್ತಿಯ ಬಂಧನ

ರೋಗ ಹೆಚ್ಚಳಕ್ಕೆ ಕಾರಣ:
ಮಳೆ ಹೆಚ್ಚಾಗಿರುವುದು ರೋಗ ಉಲ್ಬಣಿಸಲು ಪ್ರಮುಖ ಕಾರಣವಾಗಿದೆ. ಮಳೆಯಿಂದ ಎಲ್ಲೆಡೆ ನೀರು ನಿಂತಿದ್ದು, ಗುಂಡಿಗಳಲ್ಲೂ ಶುದ್ಧ ನೀರು ಸಂಗ್ರಹವಾಗಿದೆ. ಇಂತಹ ಶುದ್ಧ ನೀರಿನಲ್ಲಿ ಕುರಿ, ಮೇಕೆಗಳಿಗೆ ರೋಗ ಹರಡುವ ಸೊಳ್ಳೆಗಿಂತ ಸ್ವಲ್ಪ ದಪ್ಪನಾದ ನೊಣ(ಕುರುಡು ನೊಣ) ಬೆಳವಣಿಗೆ ಕಾಣುತ್ತದೆ. ನೀರು ಹರಿದರೆ ಇವು ಬೆಳವಣಿಗೆ ಕಾಣುವುದಿಲ್ಲ. ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತವೆ. ಈ ನೊಣ ಕಚ್ಚುವುದರಿಂದ ರೋಗ ಹರಡುತ್ತದೆ.

ರೋಗ ಲಕ್ಷಣ:
ಆರಂಭದಲ್ಲಿ ಜ್ವರ ಬರುತ್ತದೆ. ಕುರಿ, ಮೇಕೆಗಳ ತುಟಿ ದಪ್ಪನಾಗಿ, ಗದ್ದ, ಮುಖ ಊದಿಕೊಳ್ಳುತ್ತದೆ. ಬಾಯಿಗಳ ಒಸಡಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ನಂತರ ನಾಲಿಗೆ ದಪ್ಪನಾಗಿ, ಕೆಂಪು ಬಣ್ಣಕ್ಕೆ ತಿರುಗುತ್ತದೆ. ದವಡೆ ಮೇಲು ಭಾಗದಲ್ಲಿ ಅಲ್ಸರ್ ಉಂಟಾಗುತ್ತದೆ. ನಿಧಾನವಾಗಿ ನಿತ್ರಾಣಗೊಂಡು ಕುಂಟಲು ಆರಂಭಿಸುತ್ತವೆ. ಇದನ್ನೂ ಓದಿ: ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನದಂತೆ: ಎಚ್‍ಡಿಕೆ

ದಷ್ಟಪುಷ್ಟವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕುರಿಗಳಿಗೆ ಬಂದರೆ ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಬೇಗ ರೋಗ ಉಲ್ಬಣಿಸಿ ಸಾವನ್ನಪ್ಪುತ್ತವೆ. ಇದರಿಂದಾಗಿ ಕುರಿಗಾರರು ಸಾಕಷ್ಟು ನಷ್ಟ ಅನುಭವಿಸುತ್ತಾರೆ.

ಲಸಿಕೆ:
ಪಶುಪಾಲನೆ ಇಲಾಖೆಯಲ್ಲಿ ನೀಲಿ ನಾಲಿಗೆ ರೋಗಕ್ಕೆ ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮ ಇಲ್ಲ. ರೈತರೇ ಸ್ವಂತ ಹಣದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. ಅಲ್ಪ ಪ್ರಮಾಣದಲ್ಲಿ ಇಲಾಖೆ ಲಸಿಕೆ ಹಾಕುತ್ತಿದ್ದು, ಜಿಲ್ಲೆಯಲ್ಲಿರುವ ಕುರಿ, ಮೇಕೆಗಳ ಸಂಖ್ಯೆಗೆ ಹೋಲಿಸಿದರೆ ಇದು ಏನೇನೂ ಸಾಲದಾಗಿದೆ. ಜಾನುವಾರುಗಳಿಗೆ ಸಾಮೂಹಿಕವಾಗಿ ಲಸಿಕೆ ಹಾಕುವ ಮೂಲಕ ಕುರಿ, ಮೇಕೆಗಳ ಪ್ರಾಣ ಉಳಿಸಬೇಕು ಎಂದು ಪಾವಗಡ ತಾಲೂಕು ದೊಮ್ಮತಮರಿ ಗ್ರಾಮದ ರೈತ ನಂಜುಂಡಪ್ಪ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *