ಗೂಗಲ್ ನಂತರ ಇದೀಗ ಇಂಟೆಲ್- ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ

ವಾಷಿಂಗ್ಟನ್: ಕೆಲವು ದಿನಗಳ ಹಿಂದೆಯಷ್ಟೆ ಗೂಗಲ್ ತನ್ನ ಉದ್ಯೋಗಿಗಳ ಲಸಿಕೆಯನ್ನು ಕಡ್ಡಾಯಗೊಳಿಸಿತ್ತು. ನಿಗದಿತ ಸಮಯದ ಒಳಗಾಗಿ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ತನ್ನ ಉದ್ಯೋಗಿಗಳಿಗೆ ವೇತನ ನೀಡದೇ ವೈಯಕ್ತಿಕ ರಜೆ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಇಂಟೆಲ್ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಲಸಿಕೆ ಕಡ್ಡಾಯಗೊಳಿಸಿದೆ.

ಇತ್ತೀಚೆಗೆ ದೊಡ್ಡ ಟೆಕ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಮಾಡುತ್ತಿದೆ. ಲಸಿಕೆ ಹಾಕಿಸಿಕೊಳ್ಳದೇ ಇರುವ ಉದ್ಯೋಗಿಗಳ ಮೇಲೆ ಕಂಪನಿಗಳು ದಯೆ ತೋರುವಂತೆ ಕಾಣಿಸುತ್ತಿಲ್ಲ. ಇಂಟೆಲ್ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ವೇತನ ನೀಡದ ರಜೆಯನ್ನು ವಿಧಿಸುವುದಾಗಿ ಎಚ್ಚರಿಸಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ

ಇಂಟೆಲ್ ಕಂಪನಿ ಜನವರಿ 4ರ ಒಳಗಾಗಿ ತನ್ನ ಉದ್ಯೋಗಿಗಳ ಲಸಿಕೆಯ ಪ್ರಮಾಣಪತ್ರವನ್ನು ಸಲ್ಲಿಸಲು ಸೂಚಿಸಿದೆ. ಲಸಿಕೆಯ ವಿವರ ಸಲ್ಲಿಸದೇ ಹೋದಲ್ಲಿ ಉದ್ಯೋಗಿಗಳಿಗೆ ವೇತನ ನೀಡದೇ ರಜೆ ವಿಧಿಸಲಾಗುವುದು ಎಂದು ಹೇಳಿದೆ.

ಲಸಿಕೆ ಪಡೆಯದ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಪ್ರತೀ ವಾರ ಪರೀಕ್ಷೆಗೆ ಒಳಗಾಗಿ ವರದಿ ಸಲ್ಲಿಸಬೇಕು. 2022ರ ಮಾರ್ಚ್ 15ರ ವರೆಗೆ ಈ ವಿನಾಯಿತಿಯನ್ನು ಪಡೆಯಬಹುದು ಎಂದು ಇಂಟೆಲ್ ಹೆಚ್‌ಆರ್ ಕ್ರಿಸ್ಟಿ ಪಂಬಿಯಾಂಚಿ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

ಈ ವಿನಾಯಿತಿಯನ್ನೂ ಉದ್ಯೋಗಿಗಳು ಸದುಪಯೋಗಪಡಿಸಿಕೊಳ್ಳದೇ ಹೋದಲ್ಲಿ ಏಪ್ರಿಲ್ 4 ರಿಂದ ಮೂರು ತಿಂಗಳ ವೇತನ ರಹಿತ ರಜೆಯನ್ನು ವಿಧಿಸುತ್ತದೆ ಎಂದು ಉದ್ಯೋಗಿಗಳಿಗೆ ನೀಡಲಾದ ಮೆಮೋದಲ್ಲಿ ಉಲ್ಲೇಖಿಸಿದೆ. ಕಂಪನಿ ರಜೆಯಲ್ಲಿರುವ ಉದ್ಯೋಗಿಗಳಿಗೆ ಆರೋಗ್ಯ ಪ್ರಯೋಜನಗಳನ್ನೂ ವಿತರಿಸುತ್ತದೆ ಎಂದು ಹೇಳಿದೆ.

Comments

Leave a Reply

Your email address will not be published. Required fields are marked *